ಚೆನ್ನೈ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹುನಿರೀಕ್ಷಿತ ಚಿತ್ರ-ಭೂಗತ ಡ್ರಾಮ 'ಕಬಾಲಿ' ಸಿನೆಮಾದ ಆಡಿಯೋ ಬಿಡುಗಡೆ ಅದ್ದೂರಿಯಾಗಿ ಜೂನ್ ೧೧ಕ್ಕೆ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.
"ಆಡಿಯೋ ಬಿಡುಗಡೆಗೆ ಜೂನ್ ೧೧ನೆಯ ತಾರೀಕನ್ನು ಆಯ್ಕೆ ಮಾಡಲಾಗಿದೆ. ಅಂದಿಗೆ ರಜನಿಕಾಂತ್ ಅಮೆರಿಕಾದ ರಜಾ ವಿರಾಮ ಮುಗಿಸಿ ಬಂದಿರುತ್ತಾರೆ. ಈ ಮೊದಲು ಜೂನ್ ೯ಕ್ಕೆ ಹಮ್ಮಿಕೊಳ್ಳಲಾಗಿತ್ತು ಆದರೆ ವಾರಾಂತ್ಯಕ್ಕೆ ನಡೆಸಲು ನಿರ್ಮಾಪಕರು ಎರಡು ದಿನ ಮುಂದೂಡಿದ್ದಾರೆ" ಎಂದು ಮೂಲಗಳು ತಿಳಿಸಿವೆ.
ಚೆನ್ನೈ ನಗರದ ವೈ ಎಂ ಸಿ ಎ ಮೈದಾನದಲ್ಲಿ ಈ ಅದ್ದೂರಿ ಬಿಡುಗಡೆ ನಡೆಯಲಿದೆ. ಪಾ ರಂಜಿತ್ ನಿರ್ದೇಶನದ ಈ ಚಿತ್ರದಲ್ಲಿ ರಜನಿಕಾಂತ್ ೩೨ ವರ್ಷದ ಹಾಗೂ ೬೦ ವರ್ಷದ ಭೂಗತ ದೊರೆಯಾಗಿ ವಿವಿಧ ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ರಾಧಿಕಾ ಆಪ್ಟೆ, ದಿನೇಶ್, ಧಾನಿಶ್ಕ, ಕಿಶೋರ್, ಕಲೈಅರಸನ್ ಮುಂತಾದವರು ನಟಿಸಿರುವ ಸಿನೆಮಾ ಜುಲೈ ೧ ಕ್ಕೆ ಬಿಡುಗಡೆಯಾಗಿದೆ. ಸಂತೋಷ್ ನಾರಾಯಣನ್ ಸಿನೆಮಾಗೆ ಸಂಗೀತ ನೀಡಿದ್ದಾರೆ.