ಬೆಂಗಳೂರು: ದಕ್ಷಿಣ ಮತ್ತು ಉತ್ತರ ಭಾರತದ ಚಿತ್ರರಂಗದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕನ್ನಡ ನಟ ಸುದೀಪ್ ತಮ್ಮ ಹೊಸ ಚಲನಚಿತ್ರ 'ಹೆಬ್ಬುಲಿ'ಯ ಅವತಾರದಲ್ಲಿ ಅಭಿಮಾನಿಗಳಿಗೆ ರೋಮಾಂಚನ ತರಿಸಿದ್ದಾರೆ.
ಎಸ್ ಕೃಷ್ಣ ನಿರ್ದೇಶನದ 'ಹೆಬ್ಬುಲಿ'ಯ ಚಿತ್ರೀಕರಣ ಪ್ರಾರಂಭವಾಗುವುದಕ್ಕೆ ೧೮ ತಿಂಗಳು ಹಿಡಿದಿತ್ತು. ಈಗ ಚಿತ್ರದ ಮೊದಲ ನೋಟ ಲಭ್ಯವಿದ್ದು ಸುದೀಪ್ ಕಮ್ಯಾಂಡೊ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನೆಮಾದ ಫೋಟೋ ಶೂಟ್ ಅನ್ನು ಅಂತಾರಾಷ್ಟ್ರೀಯ ಖ್ಯಾತಿಯ ಆಸ್ಟ್ರೇಲಿಯಾದ ಡ್ಯಾರೆನ್ ಸೆಂಟೋಫಾಂಟಿ ನಡೆಸಿಕೊಟ್ಟಿದ್ದಾರೆ.
"ಸುದೀಪ್ ವಿಭಿನ್ನ ಕೇಶವಿನ್ಯಾಸ ಮಾಡಿಸಿಕೊಂಡಿದ್ದಾರೆ. ಇದಿನ್ನೂ 'ಹೆಬ್ಬುಲಿ'ಯ ಪ್ರಾರಂಭ ಅಷ್ಟೇ. ಎಲ್ಲವೂ ಸರಿಯಾಗಿ ನಡೆಯುವ ಭರವಸೆಯಿದೆ. ಒಂದು ಹಂತದ ಚಿತ್ರೀಕರಣ ಮುಗಿದಿದೆ ಇನ್ನು ಕೆಲವೇ ದಿನಗಳಲ್ಲಿ ಮುಂದಿನ ಹಂತದ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ. ಫೋಟೋ ಶೂಟ್ ಅದ್ಭುತವಾಗಿತ್ತು ಮತ್ತು ಅಭಿಮಾನಿಗಳ ನಡುವೆ ಸಂಚಲನ ಮೂಡಿಸಿದೆ" ಎನ್ನುತ್ತಾರೆ ನಿರ್ದೇಶಕ ಕೃಷ್ಣ.
'ಹೆಬ್ಬುಲಿ'ಯಲ್ಲಿ ಅಮಲಾ ಪೌಲ್ ನಾಯಕ ನಟಿ ಹಾಗೂ ರವಿಶಂಕರ್ ಮತ್ತು ಚಿಕ್ಕಣ್ಣ ತಾರಾಗಣದಲ್ಲಿದ್ದಾರೆ.