ಬೆಂಗಳೂರು: ಹೈದರಾಬಾದ್ ಮೂಲದ ಸಂಸ್ಥೆ ಮಕುಟ ವಿ ಎಫ್ ಎಕ್ಸ್ ನ ಸಿಇಒ ಪೀಟರ್ ಡ್ರೇಪರ್ ತೆಲುಗಿನ ಬ್ಲಾಕ್ ಬಸ್ಟರ್ ಸಿನೆಮಾಗಳಾದ 'ಈಗ' ಮತ್ತು 'ಬಾಹುಬಲಿ' ಸಿನೆಮಾಗಳಲ್ಲಿ ಗ್ರಾಫಿಕ್ಸ್ ಕೆಲಸ ಮಾಡಿದವರು. ಈಗ ಅವರು ಕನ್ನಡದ ಜನಪ್ರಿಯ ನಟ ದಿವಂಗತ ವಿಷ್ಣುವರ್ಧನ್ ಅವರನ್ನು 'ನಾಗರಹಾವು' ಸಿನೆಮಾದಲ್ಲಿ ಮತ್ತೆ ಬೆಳ್ಳಿ ತೆರೆಯ ಮೇಲೆ ತರಲು ಕೆಲಸ ಮಾಡಿದ್ದಾರೆ.
ಈ ಸಿನೆಮಾದ ಟೀಸರ್ ಈಗಾಗಲೇ ೧೦ ಲಕ್ಷಕ್ಕೂ ಹೆಚ್ಚು ನೋಟಗಳನ್ನು ದಾಟಿದ್ದು ಕನ್ನಡ ಸಿನೆಮಾ ಟೀಸರ್ ಒಂದಕ್ಕೆ ಇದು ದಾಖಲೆಯೇ. ಈ ಸಿನೆಮಾ ತಮಿಳು ಮತ್ತು ತೆಲುಗು ಭಾಷೆಗಳಲ್ಲೂ ಸಿದ್ಧವಾಗುತ್ತಿರುವುದು ವಿಶೇಷ.
ಈ ಸಿನೆಮಾದಲ್ಲಿ ರಮ್ಯ ಮತ್ತು ದಿಗಂತ್ ಮುಖ್ಯ ಪಾತ್ರದಲ್ಲಿದ್ದಾರೆ. ರಮ್ಯ ರಾಜಕೀಯಕ್ಕೆ ಧುಮುಕಿ ಕಾಂಗ್ರೆಸ್ ಪಕ್ಷದ ಧುರೀಣರಾಗಿ ಗುರುತಿಸಿಕೊಂಡು ಸಿನೆಮಾಗಳಿಂದ ಸ್ವಲ್ಪ ಸಮಯ ಕಾಲ ದೂರವುಳಿದಿದ್ದವರು. ಈಗ ೧೨೦ ಅಡಿ ಹಾವಿನ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದು, ಸಿನೆಮಾ ಪ್ರಚಾರಕ್ಕೆ ಉಸ್ತುಕರಾಗಿದ್ದಾರೆ.
ಕೋಡಿ ರಾಮಕೃಷ್ಣ ನಿರ್ದೇಶನದ ಈ ಸಿನೆಮಾದ ಒಟ್ಟು ಬಜೆಟ್ ೪೦ ಕೋಟಿ ಆಗಿದ್ದು, ವಿಷ್ಣುವರ್ಧನ್ ಪಾತ್ರ ಸೃಷ್ಟಿಸುವುದಕ್ಕಾಗಿಯೇ ೧೧ ಕೋಟಿ ವ್ಯಯಿಸಲಾಗಿದೆಯಂತೆ.
ಸಿಟಿ ಎಕ್ಸ್ಪ್ರೆಸ್ ಜೊತೆಗೆ ಮಾತನಾಡಿದ ಗ್ರಾಫಿಕ್ಸ್ ತಂತ್ರಜ್ಞ ಪೀಟರ್ ಡ್ರೇಪರ್ ಅವರೊಂದಿಗೆ ನಡೆಸಿದ ಸಂದರ್ಶನ ಭಾಗ ಇಲ್ಲಿದೆ.
ಏನಿದು ಮಕುಟ ವಿ ಎಫ್ ಎಕ್ಸ್?
ಎಸ್ ಎಸ್ ರಾಜಮೌಳಿ ನಿರ್ದೇಶನದ 'ಮಗಧೀರ' ಸಿನೆಮಾದ ನಂತರ ಕಲಾವಿದರು ಮತ್ತು ನಿರ್ಮಾಪಕರು ಸೇರಿ ಸ್ಥಾಪಿಸಿದ ಸಂಸ್ಥೆ ಮಕುಟ ಆರು ವರ್ಷಗಳಿಂದ ತನ್ನ ಕಾರ್ಯ ನಿರ್ವಹಿಸುತ್ತಿದೆ. ಈ ಸಮಯದಲ್ಲಿ ಪ್ರಖ್ಯಾತ ಸಿನೆಮಾಗಳಾದ 'ಈಗ' ಮತ್ತು 'ಬಾಹುಬಲಿ' ಸಿನೆಮಾಗಳ ಮೇಲೆ ನಾವು ಕೆಲಸ ಮಾಡಿದ್ದೇವೆ ಮತ್ತು ಇತ್ತೀಚೆಗಷ್ಟೇ 'ನಾಗರಹಾವು' ಸಿನೆಮಾದ ಕೆಲಸಗಳನ್ನು ಮುಗಿಸಿದ್ದೇವೆ.
ನಿಮಗೆ 'ನಾಗರಹಾವು' ಯೋಜನೆ ಸಿಕ್ಕಿದ್ದು ಹೇಗೆ?
ನಾವು 'ಈಗ' ಸಿನೆಮಾದ ಕೆಲಸವನ್ನು ಮುಗಿಸಿದ್ದೆವು, ಆಗ ನಮಗೆ ಈ ಯೋಜನೆಯ ಅವಕಾಶ ಬಂದದ್ದು. ಆ ಸಮಯಕ್ಕೆ ಸಾಕಷ್ಟು ಚಿತ್ರೀಕರಣ ಮುಗಿದಿತ್ತು. ಹಾವಿನ ವಿನ್ಯಾಸವನ್ನು ಇನ್ನೂ ಉತ್ತಮಪಡೀಸಬೇಕಿತ್ತು. ನಮಗೆ ಅದನ್ನು ಸರಳವಾಗಿ ಮಾಡಲು ಹಿಡಿಸಲಿಲ್ಲ, ಬದಲಾಗಿ ಹೆಚ್ಚಿನ ಭಾವನೆಗಳನ್ನು ತುಂಬಿ ಗ್ರಾಫಿಕ್ಸ್ ಮಾಡಲು ನಿಶ್ಚಯಿಸಿದೆವು.
ಜನ 'ನಾಗರಹಾವು' ಮತ್ತು 'ಬಾಹುಬಲಿ' ಎರಡನ್ನೂ ಹೋಲಿಕೆ ಮಾಡುತ್ತಿದ್ದಾರೆ?
ನಾವು ಈ ಎರಡು ಸಿನೆಮಾಗಳಿಗೆ ಬಳಸಿದ ತಂತ್ರಜ್ಞಾನ ಮತ್ತು ಕಲಾವಿದರ ತಂಡ ಒಂದೆ. ಆದರೆ ಎರಡೂ ಸಿನೆಮಾಗಳ ವಿಷಯ ಬೇರೆ ಬೇರೆ. ಆದುದರಿಂದ ಈ ಹೋಲಿಕೆ ಸೇಬುಗಳನ್ನು ಕಿತ್ತಳೆ ಹಣ್ಣಿಗೆ ಹೋಲಿಸಿದಂತೆ.
ವಿಷ್ಣುವರ್ಧನ್ ಅವರಿಗೆ ಮತ್ತೆ ಜೀವ ತುಂಬಿದ್ದು ಹೇಗೆ?
ಈ ಸನ್ನಿವೇಶಕ್ಕಾಗಿ ನೂರಾರು ಕಲಾವಿದರು ಒಟ್ಟಿಗೆ ಕೆಲಸ ಮಾಡಿದ್ದಾರೆ. ಅವರು ನಟಿಸಿದ್ದ ಹಲವಾರು ಹಿಂದಿನ ಸಿನೆಮಾಗಳ ವಿಡಿಯೋ ದೃಶ್ಯಗಳನು ಕ್ರೋಢೀಕರಿಸಿದೆವು. ದೃಶ್ಯಕ್ಕೆ ತಕ್ಕಂತೆ ಹೊಸದಾಗಿ ವಿಷ್ಣುವರ್ಧನ್ ಅವರನ್ನು ಮೂಡಿಸಿದ್ದೇವೆ.