ಬೆಂಗಳೂರು: ನಟಿ ರಚಿತಾ ರಾಮ್ ಅವರ ಗುರಿಗಳು ಮತ್ತು ಸಾಧನೆಗಳು ಒಂದಕ್ಕೊಂದು ಪೂರಕವಾಗಿ ಮುನ್ನಡೆದಿವೆ. ಕನ್ನಡದ ಜನಪ್ರಿಯ ನಟರ ಎದುರು ನಟಿಸಲು ಅವಕಾಶಗಳನ್ನು ಪಡೆಯುತ್ತಲೇ ಇರುವ ನಟಿ ಈಗ ಶಿವರಾಜ್ ಕುಮಾರ್ ಜೊತೆಗೂ ನಟಿಸಲಿದ್ದಾರೆ.
ಕೆ ಎ ಸುರೇಶ್ ನಿರ್ಮಿಸುತ್ತಿರುವ ಶಿವರಾಜ್ ಕುಮಾರ್ ಅಭಿನಯದ 'ಖದರ್' ಸಿನೆಮಾದಲ್ಲಿ ನಟಿ ರಚಿತಾ ರಾಮ್ ನಟಿಸಲಿದ್ದಾರೆ. 'ಶಿವಲಿಂಗ'ದ ಯಶಸ್ಸಿನ ಉತ್ತುಂಗದಲ್ಲಿರುವ ನಟ ಶಿವರಾಜ್ ಕುಮಾರ್ ಕನ್ನಡದ ಅತಿ ಹೆಚ್ಚು ಬ್ಯುಸಿ ನಟ!
ಮೂಲಗಳ ಪ್ರಕಾರ ಎಲ್ಲ ಮಾತುಕತೆಗಳು ಅಂತಿಮವಾಗಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿರುವುದು. ದರ್ಶನ್ ಜೊತೆಗೆ 'ಬುಲ್ ಬುಲ್' ಸಿನೆಮಾದಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ ನಟಿ ನಂತರ 'ದಿಲ್ ರಂಗೀಲಾ', 'ಅಂಬರೀಶ', 'ರನ್ನ', 'ರಥಾವರ' ಸಿನೆಮಾಗಳಲ್ಲೂ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇತ್ತೀಚೆಗಷ್ಟೇ ಪುನೀತ್ ರಾಜಕುಮಾರ್ ಅವರೊಂದಿಗೆ 'ಚಕ್ರವ್ಯೂಹ'ದಲ್ಲಿ ಕೂಡ ನಟಿಸಿದ್ದರು.
'ಗೋವಿಂದಾಯ ನಮಃ' ಸಿನೆಮಾಗೆ ಸಹನಿರ್ದೇಶಕನಾಗಿ ದುಡಿದಿದ್ದ ಕುಮಾರ್ ಎಸ್ ರಾಜ್ ಅವರು 'ಖದರ್' ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಪಾದಾರ್ಪಣೆ ಮಾಡಲಿದ್ದಾರಂತೆ. ಈ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ಕಥೆ ಮತ್ತು ಚಿತ್ರ ಕಥೆ ಬರೆದಿರುವುದ ಕೂಡ ಅವರೇ!
'ಶಿವಲಿಂಗ' ೧೦೦ ದಿನ ಪೂರೈಸಿರುವ ಸಂದರ್ಭದಲ್ಲಿ ಜೂನ್ ೧೯ರಂದು ಸಂಭ್ರಮಾಚರಣೆಗಳಿಗಾಗಿ ಕಾರ್ಯಕ್ರಮ ನಡೆಸಲಿದ್ದು ಅಲ್ಲಿ 'ಖದರ್' ಸಿನೆಮಾದ ಥೀಮ್ ಸಂಗೀತ ಬಿಡುಗಡೆ ಮಾಡಲಿದ್ದಾರಂತೆ. ತೆಲುಗು ನಟ ಬಾಲಕೃಷ್ಣ ಮತ್ತು ಕನ್ನಡದ ಹಿರಿಯ ನಟ ಅಂಬರೀಶ್ ಮತ್ತಿತರ ದಕ್ಷಿಣ ಭಾರತದ ತಾರಾನಟರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸದ್ಯಕ್ಕೆ ರಚಿತಾ 'ಭರ್ಜರಿ' ಸಿನೆಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದು, 'ಪುಷ್ಪಕ ವಿಮಾನ' ಸಿನೆಮಾದ ಬಿಡುಗಡೆಗೆ ಕಾಯುತ್ತಿದ್ದಾರೆ.