ನವದೆಹಲಿ: ಸೆನ್ಸಾರ್ ಮಂಡಲಿ ೧೩ ಕಡೆ ಕತ್ತರಿ ಹಾಕಲು ಸೂಚಿಸಿದ್ದನ್ನು ತಡೆ ಹಿಡಿದು 'ಉಡ್ತಾ ಪಂಜಾಬ್' ಸಿನೆಮಾದಿಂದ ಒಂದು ಕಟ್ ಮಾತ್ರ ಸೂಚಿಸಿ ಬಿಡುಗಡೆಗೆ ಅನುವು ಮಾಡಿಕೊಟ್ಟಿತ್ತು ಬಾಂಬೆ ಹೈಕೋರ್ಟ್. ಈಗ ಆ ಒಂದು ಬದಲಾವಣೆಯನ್ನು ಸಿನೆಮಾದ ಪ್ರಮೋ ವಿಡಿಯೋಗಳಲ್ಲೂ ಒಳಗೊಳ್ಳುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.
ಯೂಟ್ಯೂಬ್ ನಲ್ಲಿರುವ ಟ್ರೇಲರ್-ಟೀಸರ್ ವಿಡಿಯೋಗಳಿಂದ ಆ ದೃಶ್ಯವನ್ನು ತೆಗೆಯುವಂತೆ ನ್ಯಾಯಮೂರ್ತಿ ಸುನಿಲ್ ಗೌರ್ ಮತ್ತು ಪಿ ಎಸ್ ತೇಜಿ ಒಳಗೊಂಡ ವಿಭಾಗಿಯ ಪೀಠ ಸೂಚಿಸಿದೆ.
ಸರ್ಕಾರೇತರ ಸಂಸ್ಥೆಯೊಂದು ಮಾಡಿದ್ದ ಮನವಿಯನ್ನು ಪುರಸ್ಕರಿಸಿದ ಕೋರ್ಟ್, ಬಾಂಬೆ ಹೈಕೋರ್ಟ್ ನೀಡಿರುವ ತೀರ್ಪಿನಂತೆ ಬದಲಾವಣೆಯನ್ನು ಪ್ರಮೋ ವಿಡಿಯೋಗಳಲ್ಲಿ ಕೂಡ ಮಾಡುವಂತೆ ಸೂಚಿಸಿದೆ.
ಶಾಹಿದ್ ಕಪೂರ್, ಆಲಿಯಾ ಭಟ್ ಮತ್ತು ಕರೀನಾ ಕಪೂರ್ ಮುಖ್ಯ ಭೂಮಿಕೆಯಲ್ಲಿರುವ 'ಉಡ್ತಾ ಪಂಜಾಬ್' ಜೂನ್ ೧೭ಕ್ಕೆ ಬಿಡುಗಡೆಗೆ ಸಜ್ಜಾಗಿದೆ.