ಬೆಂಗಳೂರು: ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವ ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಹಾಗೂ ಪ್ರಿಯಾ ಬುಧವಾರ ವಿಚಾರಣೆಗೆ ಕೋರ್ಟ್ ಗೆ ಹಾಜರಾಗಲಿಲ್ಲ. ಹೀಗಾಗಿ
ನ್ಯಾಯಾಧೀಶರು ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಿದ್ದಾರೆ.
ಸುದೀಪ್ ಅವರು ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವುದರಿಂದ ಇಂದು ಸಹ ನ್ಯಾಯಾಲಯಕ್ಕೆ ಹಾಜರಾಗುಲು ಸಾಧ್ಯವಾಗಲಿಲ್ಲ. ಸುದೀಪ್ ಹಾಗೂ ಪ್ರಿಯಾ ಇಂದು ಕೋರ್ಟ್ ಗೆ ಹಾಜರಾಗಿ ನ್ಯಾಯಾಧೀಶರ ಮುಂದೆ ತಮ್ಮ ಹೇಳಿಕೆಗಳನ್ನು ದಾಖಲಿಸಬೇಕಿತ್ತು. ಆದರೆ ದಂಪತಿಗಳಿಬ್ಬರು ಹಾಜರಾಗದ ಕಾರಣ ವಿಚಾರಣೆಯನ್ನು ಮುಂದೂಡಲಾಗಿದೆ.
2001ರಲ್ಲಿ ಸುದೀಪ್ ಕೇರಳ ಮೂಲದ ನಾಯರ್ ಕುಟುಂಬದ ಪ್ರಿಯಾ ರಾಧಕೃಷ್ಣನ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು.ಅವರಿಗೆ 11 ವರ್ಷದ ಸಾನ್ವಿ ಎಂಬ ಮಗಳಿದ್ದು, ಅವಳನ್ನು ಪ್ರಿಯಾ ಸುಪರ್ದಿಗೆ ನೀಡಲು ಸುದೀಪ್ ಒಪ್ಪಿದ್ದಾರೆ. ಅಲ್ಲದೆ ಅವರಿಬ್ಬರ ಜೀವನಾಂಶವಾಗಿ 11 ಕೋಟಿ ರೂಪಾಯಿ ನೀಡಲು ಸುದೀಪ್ ಒಪ್ಪಿದ್ದರೆನ್ನಲಾಗಿದೆ.
ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಅವರಿಬ್ಬರು ದೂರವಾಗಲು ನಿರ್ಧರಿಸಿ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.