ಸಿನಿಮಾ ಸುದ್ದಿ

ಶರ್ಮಿಳಾ ಟ್ಯಾಗೋರ್, ದೀಪಾ ಮೆಹ್ತಾ ಆಸ್ಕರ್ ಅಕಾಡೆಮಿ ನೂತನ ಸದಸ್ಯರು

Guruprasad Narayana
ಲಾಸೇಂಜಲಿಸ್: ಅಕಾಡೆಮಿ ಆಫ್ ಮೋಶನ್ ಪಿಕ್ಚರ್ಸ್ ಆರ್ಟ್ಸ್ ಅಂಡ್ ಸೈನ್ಸಸ್ ನ ಮಂಡಳಿಯಲ್ಲಿ ಸದಸ್ಯರಾಗಲು ಭಾರತೀಯ ಮೂಲದ ಖ್ಯಾತ ನಟಿ ಶರ್ಮಿಳಾ ಟ್ಯಾಗೋರ್, 'ಸ್ಲಮ್ ಡಾಗ್ ಮಿಲಿಯನೇರ್' ನಟಿ ಫ್ರಿಡಾ ಪಿಂಟೋ ಮತ್ತು ನಿರ್ದೇಶಕಿ ದೀಪಾ ಮೆಹ್ತಾ ಅವರಿಗೆ ಆಹ್ವಾನ ನೀಡಲಾಗಿದೆ. 
ಅಕಾಡೆಮಿ ದಾಖಲೆ 683 ನೂತನ ಸದಸ್ಯರಿಗೆ ಆಹ್ವಾನ ನೀಡಿದ್ದು ಅವರಲ್ಲಿ ಶೇಕಡಾ 46 ಮಹಿಳೆಯರು, 41% ಬಿಳಿಯೇತರ ಬಣ್ಣದ ಸಮುದಾಯದವರಾಗಿದ್ದಾರೆ. ಆಸ್ಕರ್ ಅಕಾಡೆಮಿಯಲ್ಲಿ ಹೆಚ್ಚು ಪುರುಷರು ಮತ್ತು ಬಿಳಿಯರೇ ಇದ್ದಾರೆ ಎಂಬ ಆರೋಪದ ಮೇರೆಗೆ, ವೈವಿಧ್ಯತೆಯನ್ನು ಹೆಚ್ಚಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ. 
ಟ್ಯಾಗೋರ್, ಪಿಂಟೋ ಮತ್ತು ಮೆಹ್ತಾ ಅಲ್ಲದೆ, ಭಾರತೀಯ ಮೂಲದ ಬ್ರಿಟಿಷ್ ನಿರ್ದೇಶಕ ಆಸಿಫ್ ಕಪಾಡಿಯಾ ಅವರಿಗೂ ಸದಸ್ಯತ್ವ ನೀಡಲಾಗಿದೆ. 
"ಅಕಾಡೆಮಿಗೆ ಈ ಹೊಸ ಸದಸ್ಯರನ್ನು ಆಹ್ವಾನಿಸಲು ಹೆಮ್ಮೆಯಾಗುತ್ತಿದೆ. ಇದು ಕೇವಲ ಆಹ್ವಾನವಷ್ಟೇ ಅಲ್ಲ ಬದಲಾಗಿ ಅವಕಾಶ ಎಂದು ಅವರು ತಿಳಿದಿದ್ದು, ಸದಸ್ಯತ್ವ ಅಷ್ಟೇ ಅಲ್ಲ ಬದಲಾಗಿ ಇದು ಗುರಿ" ಎಂದು ಅಕಾಡೆಮಿ ಅಧ್ಯಕ್ಷ ಚೆರಿಲ್ ಬುನೇ ಐಸ್ಯಾಕ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. 
ವಿವಿಧ ವಯೋಮಾನದ ಸದಸ್ಯರು ಕೂಡ ಸದಸ್ಯತ್ವ ಪಡೆದಿದ್ದು ಈಗ 24 ವರ್ಷದಿಂದ ಹಿಡಿದು 91 ವರ್ಷದವರೆಗೆ ವಿವಿಧ ಹಿನ್ನಲೆಯ ತಾರೆಯರು ಸದಸ್ಯತ್ವ ಪಡೆದಿದ್ದಾರೆ. 
ಹಾಲಿವುಡ್ ನಿಂದ 'ಸ್ಟಾರ್ ವಾರ್ಸ್' ನಟ ಜಾನ್ ಬೊಯೇಗ, ಇದ್ರಿಸ್ ಎಲಂಬಾ, ಬ್ರಿಯೆ ಲಾರ್ಸನ್, ನಿರ್ದೇಶಕರಾದ ರ್ಯಾನ್ ಕುಗ್ಲರ್, ಮೈಕೆಲ್ ಬಿ ಜಾರ್ಡನ್, ಎಮ್ಮ ವ್ಯಾಟ್ಸನ್ ಮುಂತಾದವರಿಗೂ ಆಹ್ವಾನ ನೀಡಲಾಗಿದೆ. 
SCROLL FOR NEXT