ರಾಮ್ ಗೋಪಾಲ್ ವರ್ಮಾರ ಬಹು ನಿರೀಕ್ಷಿತ ರೈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಕರ್ನಾಟಕದ ಭೂಗತ ದೊರೆ ಮುತ್ತಪ್ಪ ರೈ ಕಥೆಯಾಧಾರಿತ ಚಿತ್ರವಾದ ರೈ ಚಿತ್ರದ ಪೋಸ್ಟರ್ ಬಿಡದಿಯಲ್ಲಿರುವ ಮುತ್ತಪ್ಪ ಅವರ ಮನೆಯಲ್ಲಿ ಅವರ ಹುಟ್ಟಿದ ದಿನವಾದ ಮೇ 1ರಂದು ಬಿಡುಗಡೆಗೊಂಡಿದೆ. ಚಿತ್ರದ ಫಸ್ಟ್ ಲುಕ್ ಬಿಡುಗಡೆ ವೇಳೆ ರಾಜಕೀಯ ಮುಖಂಡರು ಹಾಗೂ ಗಣ್ಯರು ಭಾಗಿಯಾಗಿದ್ದರು.
ಬಹುಕೋಟಿ ನಿರ್ಮಾಪಕ ಎಂಬ ಖ್ಯಾತಿಗೆ ಭಾಜನರಾಗಿರುವ ಸಿಆರ್ ಮನೋಹರ್ ರೈ ಚಿತ್ರವನ್ನು 55 ಕೋಟಿ ಬಜೆಟ್ ನಲ್ಲಿ ತಯಾರಿಸಲಿದ್ದಾರೆ. ಲಂಡನ್, ದುಬೈ, ಮುಂಬೈ ಮತ್ತು ಬೆಂಗಳೂರು ಸೇರಿದಂತೆ ನಾನಾ ಕಡೆ ಚಿತ್ರೀಕರಣಕ್ಕೆ ಚಿತ್ರತಂಡ ತಯಾರಿ ನಡೆಸಿದ್ದು, ರಾಮ್ ಗೋಪಾಲ್ ವರ್ಮಾ ಚಿತ್ರದ ಸಹನಟರ ಆಯ್ಕೆಯಲ್ಲಿ ತೊಡಗಿದ್ದಾರೆ.
ಚಿತ್ರದ ಕುರಿತಂತೆ ಮಾತನಾಡಿರುವ ರಾಮ್ ಗೋಪಾಲ್ ವರ್ಮಾ ಅವರು, ನಾನು ಹೆಚ್ಚಾಗಿ ಮಾಟ ಮಂತ್ರಗಳ ಚಿತ್ರಗಳನ್ನೇ ಮಾಡುತ್ತಾ ಬಂದಿದ್ದೆ. ಆದರೆ ಮುತ್ತಪ್ಪ ರೈ ಅವರ ಕಥೆ ಕೇಳಿದ ಮೇಲೆ ಅದನ್ನೇ ಚಿತ್ರವಾಗಿ ಮಾಡಬೇಕು ಎಂದು ತೀರ್ಮಾನಿಸಿದೆ ಎಂದರು.
ಮುತ್ತಪ್ಪ ರೈ ಅವರು ಕಥೆಯ ಮೂಲಗಳಲ್ಲಿ ಒಬ್ಬರು . ಇನ್ನು ಕಥೆಗಾಗಿ ಮುತ್ತಪ್ಪ ರೈ ಅವರ ಮಾಜಿ ಸಹೋದ್ಯೋಗಿಗಳು, ಪ್ರಕರಣದ ತನಿಖಾಧಿಕಾರಿಗಳು, ವಕೀಲರು, ಸ್ನೇಹಿತರು ಮತ್ತು ಶತ್ರುಗಳನ್ನು ಜತೆ ಮಾತನಾಡಿದ ಬಳಿಕ ಚಿತ್ರದ ಕಥೆಯನ್ನು ಕಟ್ಟುತ್ತೇನೆ ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.