ಬೆಂಗಳೂರು: ದರ್ಶನ್ ನಟನೆಯ 'ಜಗ್ಗು ದಾದಾ' ಜೂನ್ ನಲ್ಲಿ ಬಿಡುಗಡೆಗೆ ಸಿದ್ಧವಾಗಿದ್ದು, ಅವರ ಮುಂದಿನ ಚಿತ್ರ 'ಚಕ್ರವರ್ತಿ' ಚಿತ್ರೀಕರಣ ಸೋಮವಾರದಿಂದ ಪ್ರಾರಂಭವಾಗಲಿದೆ. ಈ ಸಿನೆಮಾದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಲಿರುವ ಚಿಂತನ್, ಹಿಂದಿನ ಕಾಲದ ನಟರಂತೆ ಕಾಣಿಸಲು ದರ್ಶನ್ ಅವರ ನೋಟವನ್ನು ಬದಲಿಸಲು ಅಣಿಯಾಗಿದ್ದಾರೆ.
ಈ ಸಿನೆಮಾದಲ್ಲಿ ದರ್ಶನ್ ಸಹೋದರ ದಿನಕರ್ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದು, ಆದಿತ್ಯ ಮತ್ತು ಸೃಜನ್ ಲೋಕೇಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಾಲೆಂಜಿಗ್ ಸ್ಟಾರ್ ಎದುರು ಅಂಜಲಿ ನಟಿಸುತ್ತಿದ್ದರೆ, ಅರ್ಜುನ್ ಜನ್ಯ ಅವರ ಸಂಗೀತ ಚಿತ್ರಕ್ಕಿದೆ. "ನಿರ್ದೇಶಕ ಚಿಂತನ್ ಮತ್ತು ದರ್ಶನ್ ಅವರಿಂದ ಈ ಅವಕಾಶ ಒದಗಿ ಬಂತು. ಅತ್ಯುತ್ತಮವಾದದನ್ನು ನೀಡಲು ಮುಂದಾಗಿದ್ದೇನೆ" ಎನ್ನುತ್ತಾರೆ ಅರ್ಜುನ್. ಸಂದೇಶ್ ನಾಗರಾಜ್ ಮತ್ತು ಸಿದ್ಧಾಂತ್ ನಿರ್ಮಿಸುತ್ತಿರುವ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆಯಲಿದೆ. ಎಚ್ ಸಿ ವೇಣು ಸಿನೆಮ್ಯಾಟೋಗ್ರಾಫರ್.
'ಕೋಟಿಗೊಬ್ಬ-೨' ಸಿನೆಮಾದ ಚಿತ್ರೀಕರಣ ಮುಗಿಸಿರುವ ಸುದೀಪ್, ಅವರ ಬಹುನಿರೀಕ್ಷಿತ ಚಿತ್ರ 'ಹೆಬ್ಬುಲಿ' ಚಿತ್ರೀಕರಣ ಕೂಡ ಸೋಮವಾರದಿಂದ ಪ್ರಾರಂಭವಾಗಲಿದೆ. ಒಂದೆ ಹಂತದಲ್ಲಿ ಚಿತ್ರೀಕರಣ ಮುಗಿಸಲು ಸನ್ನದ್ಧವಾಗಿರುವ ಚಿತ್ರತಂಡ, ಮೊದಲಿಗೆ ಬೆಂಗಳೂರು ಮತ್ತು ನಂತರದಲ್ಲಿ ಕಾಶ್ಮೀರ ಮತ್ತಿತರ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಿದೆ. 'ಗಜಕೇಸರಿ' ನಂತರ ಎಸ್ ಕೃಷ್ಣ ಅವ್ರಿಗೆ ಇದು ಎರಡನೇ ಸಿನೆಮಾ.
ಅಮಲಾ ಪೌಲ್, ಸುದೀಪ್ ಎದುರು 'ಹೆಬ್ಬುಲಿ'ಯಲ್ಲಿ ನಟಿಸುತ್ತಿದ್ದು ಅವರಿಗೆ ಇದು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆಯಾಗಲಿದೆ.
ಈ ಸಿನೆಮಾಗೆ ಕೂಡ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದು, ಎ ಕರುಣಾಕರ್ ಸಿನೆಮ್ಯಾಟೋಗ್ರಾಫರ್.