ಆಮಿರ್ ಖಾನ್ - ತಿಥಿ ಚಿತ್ರದ ಸ್ಟಿಲ್
ಬೆಂಗಳೂರು: ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಅವರು ಕನ್ನಡದ ಸಿನಿಮಾವೊಂದನ್ನು ಹಾಡಿ ಹೊಗಳಿದ್ದು, ಹಲವು ದಿನಗಳ ನಂತರ ನೋಡಿದ ಸಿನಿಮಾಗಳಲ್ಲಿ 'ತಿಥಿ' ಒಂದು ಅದ್ಭುತ ಸಿನಿಮಾ ಎಂದು ಹೇಳಿದ್ದಾರೆ.
ಕನ್ನಡ 'ತಿಥಿ' ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅಮೀರ್ ಖಾನ್, ಗೆಳೆಯರೆ ಈಗಷ್ಟೇ ದೀರ್ಘ ಕಾಲದ ನಂತರ 'ತಿಥಿ' ಎಂಬ ಒಂದು ಅದ್ಭುತ ಸಿನಿಮಾ ನೋಡಿದೆ. ಇದು ಕನ್ನಡ ಸಿನಿಮಾ. ಆದರೆ ಇಂಗ್ಲಿಷ್ ನಲ್ಲಿ ಸಬ್ ಟೈಟಲ್ ಗಳಿವೆ. ಹೀಗಾಗಿ ಎಲ್ಲರೂ ಒಂದು ಬಾರಿ ಈ ಸಿನಿಮಾ ನೋಡಲೇಬೇಕು ಎಂದು ಅವರು ಬರೆದಿದ್ದಾರೆ.
'ನಂಬಲಾಗದ ನಟನೆ. ಅದೂ ಯಾರೂ ವೃತ್ತಿಪರ ನಟರಲ್ಲ. ಇಂತದೇ ವಿಭಾಗ ಎಂದು ಸೇರಿಸಲು ಕಷ್ಟ, ಆದರೆ ಹಾಸ್ಯಮಯ ಚಿತ್ರ ತಪ್ಪಿಸಿಕೊಳ್ಳಲೇಬೇಡಿ, ಪ್ರೀತಿಯಿಂದ' ಎಂದು ಅಮೀರ್ ಟ್ವೀಟ್ ಮಾಡಿದ್ದಾರೆ.
ಈರೇಗೌಡ ಕಥೆ ರಚಿಸಿ ರಾಮ್ ರೆಡ್ಡಿ ನಿರ್ದೇಶಿಸಿದ್ದ ಈ ಸಿನೆಮಾ ಕರ್ನಾಟಕದಲ್ಲಿ ಈಗಾಗಲೇ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಮಾತ್ರವಲ್ಲದೇ ಈ ಚಿತ್ರ ಜೂನ್ 3ರಂದು ರಾಷ್ಟ್ರಾದ್ಯಂತ ತೆರೆಕಾಣಲಿದೆ.