'ಒಪ್ಪಂ' ಸಿನೆಮಾದಲ್ಲಿ ಮೋಹನ್ ಲಾಲ್
ಬೆಂಗಳೂರು: ಪ್ರಿಯದರ್ಶನ್ ನಿರ್ದೇಶನದ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಟಿಸಿದ್ದ 'ಒಪ್ಪಂ' ಯಶಸ್ವಿ ಪ್ರದರ್ಶನ ಕಂಡ ಮಲಯಾಳಂ ಚಿತ್ರ. ಈಗ ಇದು ಕನ್ನಡಕ್ಕೆ ರಿಮೇಕ್ ಆಗಲಿದ್ದು, ಹಯಗ್ರೀವ ಚಲನಚಿತ್ರದ ಸಂಪತ್ ಕುಮಾರ್ ಇದರ ರಿಮೇಕ್ ಹಕ್ಕುಗಳನ್ನು ಖರೀದಿಸಿದ್ದಾರೆ.
"ಇದು ವಿಶೇಷ ವಿಷಯದ ಸಿನೆಮಾ ಮತ್ತು ಸಾರ್ವತ್ರಿಕವಾದದ್ದು ಕೂಡ. ಅದಕ್ಕೆ ಇದನ್ನು ಕನ್ನಡಕ್ಕೆ ತರಲು ನಿಶ್ಚಯಿಸಿದ್ದು" ಎನ್ನುತ್ತಾರೆ ಸಂಪತ್ ಕುಮಾರ್.
'ಒಪ್ಪಂ' ಸಿನೆಮಾ ನಟರಾದ ಕಮಲಾ ಹಾಸನ್ ಮತ್ತು ಅಕ್ಷಯ್ ಕುಮಾರ್ ಅವರುಗಳನ್ನು ಸೆಳೆದಿದ್ದು ಇವರಿಬ್ಬರು ಕ್ರಮವಾಗಿ ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಅಳವಡಿಸಿಕೊಳ್ಳಲು ಆಸಕ್ತಿ ತೋರಿದ್ದರೆ, ಕನ್ನಡದಲ್ಲಿ ಮುಖ್ಯ ಪಾತ್ರಕ್ಕಾಗಿ ಹಲವರ ಹೆಸರು ಮನಸ್ಸಿನಲ್ಲಿದೆ ಎನ್ನುತ್ತಾರೆ ಸಂಪತ್ ಕುಮಾರ್.
ಮೋಹನ್ ಲಾಲ್ ಪಾತ್ರಕ್ಕೆ ರವಿಚಂದ್ರನ್, ಉಪೇಂದ್ರ, ಶಿವರಾಜ್ ಕುಮಾರ್, ರಮೇಶ್ ಅರವಿಂದ್ ಮತ್ತು ಅರ್ಜುನ್ ಸರ್ಜಾ ಹೆಸರುಗಳು ಮನಸ್ಸಿನಲ್ಲಿವೆ ಎನ್ನುವ ಅವರು "ಇವೆರೆಲ್ಲರೂ ಆ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲರು ಆದರೆ ಅವರು ನನ್ನ ಸಮಯಕ್ಕೆ ಬಿಡುವಾಗಿರುವುದರ ಮೇಲೆ ಎಲ್ಲವು ನಿಂತಿದೆ. ಮುಂದಿನ ವಾರ ಬೆಂಗಳೂರಿನಲ್ಲಿರುತ್ತೇನೆ ಆಗ ಮುಖ್ಯ ನಟ, ನಿರ್ದೇಶಕ, ಉಳಿದ ತಾರಾಗಣ ಮತ್ತು ತಂತ್ರಜ್ಞರನ್ನು ಅಂತಿಮಗೊಳಿಸಲಿದ್ದೇನೆ" ಎನ್ನುತ್ತಾರೆ.
ಗೋವಿಂದ್ ವಿಜಯಂ ಅವರ ಕಥಾ ಆಧಾರಿತ ಈ ಕ್ರೈಂ ಥ್ರಿಲ್ಲರ್ ಸಿನೆಮಾದಲ್ಲಿ ಮೋಹನ್ ಲಾಲ್ ಕುರುಡನ ಪಾತ್ರದಲ್ಲಿ ನಟಿಸಿದ್ದರು.