ಸಿನಿಮಾ ಸುದ್ದಿ

ನನ್ನ ಕನಸಿಗೆ ರೆಕ್ಕೆ ಕಟ್ಟಿದ ಸಿನೆಮಾ 'ಕಹಿ': ಸೂರಜ್ ಗೌಡ

Guruprasad Narayana
ಬೆಂಗಳೂರು: ಕವಿರಾಜ್ ನಿರ್ದೇಶನದ 'ಮದುವೆಯ ಮಮತೆಯ ಕರೆಯೋಲೆ' ಸಿನೆಮಾದ ಮೂಲಕ ನಟ ಸೂರಜ್ ಗೌಡ ಕನ್ನಡ ಚಿತ್ರರಂಗಕ್ಕೆ ಅಧಿಕೃತ ಪಾದಾರ್ಪಣೆ ಮಾಡಿದರು, ಅವರನ್ನು ಬೆಳ್ಳಿತೆರೆಗೆ ಕರೆತಂದ ಸಿನೆಮಾ 'ಕಹಿ'. ಈ ಸಿನೆಮಾ ಈ ಶುಕ್ರವಾರ ಬಿಡುಗಡೆಯಾಗುತ್ತಿರುವುದಕ್ಕೆ ಸಂತಸವಾಗಿರುವ ನಟ ಇದು ಅವರಿಗೆ ವಿಶೇಷ ಸಿನೆಮಾ ಹೇಗೆಂದು ತಿಳಿಸುತ್ತಾರೆ. 
"ನಾನು ಈ ಸಿನಿಮಾಗೋಸ್ಕರವೇ ಮೈಸೂರಿನಿಂದ ಬೆಂಗಳೂರಿಗೆ ಬಂದದ್ದು ಮತ್ತು ನನ್ನ ವೃತ್ತಿಯನ್ನು ಮಾಡೆಲಿಂಗ್ ನಿಂದ ನಟನೆಗೆ ಬದಲಿಸಿಕೊಂಡಿದ್ದು. ನನ್ನ ಕನಸುಗಳಿಗೆ ರೆಕ್ಕೆ ಕಟ್ಟಿದ ಸಿನೆಮಾ ಕೂಡ ಇದು" ಎಂದು ನೆನಪಿಸಿಕೊಳ್ಳುತ್ತಾರೆ ಸೂರಜ್.
ಈಗ ಸದ್ಯಕ್ಕೆ ಕಮರ್ಷಿಯಲ್ ಸಿನೆಮಾಗಳಲ್ಲಿ ನಟಿಸುತ್ತಿರುವ ನಟ ತಮ್ಮ ವೃತ್ತಿ ಜೀವನವನ್ನು ನೈಜಕ್ಕೆ ಹತ್ತಿರವಾದ ಕಲಾತ್ಮಕ ಚಿತ್ರದಿಂದ ಪ್ರಾರಂಭಿಸಿದ್ದಕ್ಕೆ ಸಂತಸ ವ್ಯಕ್ತಪಡಿಸುತ್ತಾರೆ. "ಕಹಿ ನಾಲಗೆಗೆ ಸಂಬಂಧಿಸಿದ ರುಚಿಯಾದರು, ಸಿನೆಮಾದಲ್ಲಿ ಇದು ಭಾವನೆಗಳಿಗೆ ಸಂಬಂಧಿಸಿದ್ದು" ಎಂದು ವಿವರಿಸುತ್ತಾರೆ ಸೂರಜ್. 
"ಮೆಟ್ರೋ ನಗರದಲ್ಲಿ ಜೀವಿಸುವ ನಾಲ್ವರು ಯುವಕರ ಬಗೆಗಿನ ಚಿತ್ರ ಇದಾಗಿದ್ದು, ಸೈಕೋಪಾಥ್, ಕುಡುಕ ಮತ್ತು ಡ್ರಗ್ ಚಟಕ್ಕೆ ಬಿದ್ದಿರುವ ನನ್ನ ಪಾತ್ರದ ಸುತ್ತ ಎಲ್ಲ ಪಾತ್ರಗಳು ಸುತ್ತುತ್ತವೆ" ಎನ್ನುವ ಅವರು ಇಂತಹ ವ್ಯತಿರಿಕ್ತ ಪಾತ್ರವನ್ನು ಮಾಡುವುದು ಸವಾಲಾಗಿತ್ತು ಎನ್ನುತ್ತಾರೆ. 
"ಇಂದಿನ ಯುವಕರಿಗೆ ಆಪ್ತವಾಗುವ ಸಿನೆಮಾ ಇದೆ. ವಿಭಿನ್ನ ಶೈಲಿಯ ಚಿತ್ರಗಳನ್ನು ಜನ ಮೆಚ್ಚುತ್ತಿರುವ ಸಮಯದಲ್ಲಿ ಈ ಸಿನೆಮಾ ಮೂಡುತ್ತಿರುವುದು ಒಳ್ಳೆಯದು" ಎನ್ನುತ್ತಾರೆ ಸೂರಜ್. 
ಚೊಚ್ಚಲ ನಿರ್ದೇಶಕ ಅರವಿಂದ್ ಶಾಸ್ತ್ರಿ ಅವರೇ 'ಕಹಿ' ಸಿನೆಮಾದ ಸಂಕಲನಕಾರ ಕೂಡ. ಸೂರಜ್ ಗೌಡ ಜೊತೆಗೆ ಕೃಷಿ ತಾಪಂಡ, ಹರೀಶ್ವರ, ರಮೇಶ್ ಭಟ್, ಶ್ರೀನಿವಾಸ್ ಮೇಷ್ಟ್ರು, ಕಿಶೋರಿ ಬಲ್ಲಾಳ್, ಮಹೇಶ್ ಬುಂಗ್, ಮಾತಂಗಿ ಪ್ರಸನ್ನ ಮತ್ತು ಅರವಿಂದ್ ಅಯ್ಯರ್ ಕೂಡ ತಾರಾಗಣದ ಭಾಗವಾಗಿದ್ದಾರೆ. 
SCROLL FOR NEXT