ಮಾಸ್ತಿಗುಡಿ ಚಿತ್ರೀಕರಣ ಅವಘಡದಲ್ಲಿ ಪ್ರಾಣ ಕಳೆದುಕೊಂಡ ನಟರಾದ ಅನಿಲ್ ಮತ್ತು ವಿಜಯ್
ಬೆಂಗಳೂರು: ರಾಜ್ಯವನ್ನು ಬೆಚ್ಚಿಬೀಳಿಸಿದ ಮಾಸ್ತಿಗುಡಿ ಚಿತ್ರೀಕರಣ ದುರ್ಘಟನೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದಾಗಿದೆ.
ಈ ವಿಷಯವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ ರಾ ಗೋವಿಂದು ಪ್ರತಿಕ್ರಿಯಿಸಿದ್ದು, "ಮಾಸ್ತಿಗುಡಿ ಚಿತ್ರದ ನಿರ್ದೇಶಕ ನಾಗಶೇಖರ್, ಸಾಹಸ ನಿರ್ದೇಶಕ ರವಿವರ್ಮ, ನಟ ದುನಿಯಾ ವಿಜಯ್, ನಿರ್ಮಾಪಕ ಸುಂದರ್ ಪಿ ಗೌಡ ಅವರು ಯಾವುದೇ ರೀತಿಯ ಸಿನಿಮಾ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಚಲನಚಿತ್ರ ವಾಣಿಜ್ಯ ಮಂಡಳಿ ತಡೆ ನೀಡಿದೆ" ಎಂದು ಹೇಳಿದ್ದಾರೆ.
ಸೋಮವಾರ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮಾಸ್ತಿಗುಡಿ ಸಿನೆಮಾದ ಚಿತ್ರೀಕರಣ ನಡೆಯುವ ವೇಳೆ ಹೆಲಿಕ್ಯಾಪ್ಟಾರ್ ನಿಂದ ಜಿಗಿಯುವ ಸ್ಟಂಟ್ ಮಾಡಲು ಹೋಗಿ ಉದಯೋನ್ಮುಖ ನಟರಾದ ಅನಿಲ್ ಮತ್ತು ಉದಯ್ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದರು. ಈ ಸಮಯದಲ್ಲಿ ದುನಿಯಾ ವಿಜಯ್ ಕೂಡ ಜಿಗಿದಿದ್ದರು ಸುರಕ್ಷಿತವಾಗಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದರು.
ಚಿತ್ರೀಕರಣದ ಸಮಯದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ದೇಶದಾದ್ಯಂತ ಚಿತ್ರತಂಡದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಪೊಲೀಸರು ನಿರ್ದೇಶಕ, ನಿರ್ಮಾಪಕ, ಕಾರ್ಯಕಾರಿ ನಿರ್ಮಾಪಕ ಮತ್ತು ಸಾಹಸ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.