ಬೆಂಗಳೂರು: ನೃತ್ಯನಿರ್ದೇಶಕ-ನಿರ್ದೇಶಕ ಹರ್ಷ ಕನ್ನಡ ಚಿತ್ರರಂಗದ ಪ್ರಮುಖ ನಟರೊಂದಿಗೆ ಈಗಾಗಲೇ ಕೆಲಸ ಮಾಡಿರುವವರು. 'ಚಿಂಗಾರಿ', 'ಭಜರಂಗಿ', 'ವಜ್ರಕಾಯ' ಮತ್ತು 'ಜೈ ಮಾರುತಿ ೮೦೦' ಸಿನೆಮಾಗಳ ಮೂಲಕ ದರ್ಶನ್, ಶಿವರಾಜ್ ಕುಮಾರ್ ಮತ್ತು ಶರಣ್ ಅವರುಗಳನ್ನು ನಿರ್ದೇಶಿಸಿದ್ದಾರೆ. ಪುನೀತ್ ರಾಜಕುಮಾರ್ ನಟನೆಯ ಸಿನೆಮಾ ನಿರ್ದೇಶಿಸುವ ಅವರ ಬಹುದಿನದ ಕನಸು ಈಗ ನನಸಾಗಿದೆ.
ತಮಿಳು ಸಿನೆಮಾ 'ಪೂಜೈ' ಕನ್ನಡ ರಿಮೇಕ್ ನಲ್ಲಿ ಈಗ ಇವರಿಬ್ಬರು ಒಟ್ಟಾಗಲಿದ್ದಾರೆ. ಹರಿ ನಿರ್ದೇಶಿಸಿದ್ದ ಮೂಲ ಸಿನೆಮಾದಲ್ಲಿ ವಿಶಾಲ್ ಮತ್ತು ಶ್ರುತಿ ಹಾಸನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು.
ಪುನೀತ್, ಸಂತೋಷ್ ಆನಂದರಾಮ್ ನಿರ್ದೇಶನದ 'ರಾಜಕುಮಾರ' ಸಿನೆಮಾ ಮುಗಿಸಿದ ನಂತರ, ಜನವರಿಯಿಂದ ಈ ಸಿನೆಮಾದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎನ್ನುತ್ತಾರೆ ಹರ್ಷ.
ಮೊದಲಿಗೆ ಬುಲೆಟ್ ಪ್ರಕಾಶ್ 'ಪೂಜೈ' ಸಿನೆಮಾದ ರಿಮೇಕ್ ಹಕ್ಕುಗಳನ್ನು ಕೊಂಡಿದ್ದರಂತೆ ಮತ್ತು ದರ್ಶನ್ ಅವರು ನಾಯಕ ನಟನಾಗಿ ತೊಡಗಿಸಿಕೊಳ್ಳುವ ಆಸೆಯಿತ್ತಂತೆ. ಆದರೆ ಈ ಯೋಜನೆ ಹಲವು ಕಾರಣಗಳಿಗೆ ಪ್ರಾರಂಭವಾಗದೆ ಹೋದದ್ದಕ್ಕೆ ನಟ-ನಿರ್ಮಾಪಕ ಈ ಹಕ್ಕುಗಳನ್ನು ಎಂ ಎನ್ ಕುಮಾರ್ ಅವರಿಗೆ ಮಾರಾಟ ಮಾಡಿದ್ದಾರೆ.
"ಮೂಲದ ಸ್ಕ್ರಿಪ್ಟ್ ನಲ್ಲಿ ೬೦% ಬದಲಾವಣೆ ಮಾಡಿದ್ದೇನೆ. ಮತ್ತು ಪಾತ್ರಗಳ ಸಂಖ್ಯೆಯನ್ನು ಬದಲಾಯಿಸಿದ್ದೇವೆ" ಎನ್ನುತ್ತಾರೆ ನಿರ್ದೇಶಕ ಹರ್ಷ. ಅಭಿಮಾನಿಗಳಿಗೆ ಬೇಸರ ಮೂಡದಂತೆ ಸಿನೆಮಾ ನೀಡುವ ಭರವಸೆ ನೀಡುತ್ತಾರೆ ನಿರ್ದೇಶಕ.