ವಿಜಯವಾಡ: ಬಹುಕೋಟಿ ವೆಚ್ಚದ ಬಾಹುಬಲಿ-2 ಚಿತ್ರದ 9 ನಿಮಿಷದ ವಿಡಿಯೋವನ್ನು ಕದ್ದು. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಮಾಡುತ್ತಿದ್ದ 6 ಮಂದಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಬಾಹುಬಲಿ-2 ಚಿತ್ರದ ವಿಡಿಯೋವನ್ನು ಕದ್ದ ಆರೋಪದಡಿ ಗ್ರಾಫಿಕ್ಸ್ ಡಿಸೈನರ್ ಕೃಷ್ಣ ಎಂಬುವವರನ್ನು ಬಂಧನಕ್ಕೊಳಪಡಿಸಲಾಗಿತ್ತು.
ಅರ್ಕಾ ಮಿಡಿಯಾದ ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ದೇವರಪಲ್ಲಿ ಲಕ್ಷ್ಮಿ ಪ್ರಸಾದ್ ಅವರು ಚಿತ್ರದ ವಿಡಿಯೋ ಲೀಕ್ ಕುರಿತಂತೆ ವಿಜಯವಾಡದಲ್ಲಿ ದೂರೊಂದನ್ನು ದಾಖಲಿಸಿದ್ದರು. ಇದರಂತೆ ತನಿಖೆ ಕೈಗೊಂಡಿದ್ದ ಪೊಲೀಸರು ಇದೀಗ 6 ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತರಲ್ಲಿ ಮೂವರೂ ಇಂಜಿನಿಯರ್ ಗಳಾಗಿದ್ದು, ಇನ್ನು ಮೂವರು ಪದವಿ ವಿದ್ಯಾರ್ಥಿಗಳಾಗಿದ್ದಾರೆ. ದಯಾನಂದ್ ಎಂಬಾತ ತನ್ನ ಮೊಬೈಲ್ ನಲ್ಲಿದ್ದ ವಿಡಿಯೋವನ್ನು ಐವರು ಸ್ನೇಹಿತರಿಗೆ ರವಾನಿ ಮಾಡಿದ್ದಾನೆ. ಅಲ್ಲದೆ, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲೂ ಹಂಚಿಕೆ ಮಾಡಿದ್ದಾನೆಂದು ತಿಳಿದುಬಂದಿದೆ.
ಇದೀಗ 6 ಆರೋಪಿಗಳನ್ನು ಬಂಧನಕ್ಕೊಳಪಡಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಆರೋಪಗಳ ಬಳಿಯಿದ್ದ 6 ಸ್ಮಾರ್ಟ್ ಫೋನ್ ಗಳು ಹಾಗೂ ಲ್ಯಾಪ್ ಟಾಪ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ ಚಿತ್ರದ 9 ನಿಮಿಷಗಳ ವಿಡಿಯೋ ಲೀಕ್ ಆಗಿದ್ದು, ಬಾಹುಬಲಿ-2 ಚಿತ್ರದ ಕ್ಲೈಮ್ಯಾಕ್ಸ್ ನ ಯುದ್ಧದ ದೃಶ್ಯಾವಳಿಗಳನ್ನು ಲೀಕ್ ಮಾಡಲಾಗಿದೆ ಎಂದು ತಿಳಿದುಬಂದಿದೆ.