ಪ್ಯಾರಾ ಕಮಾಂಡೋ ನೋಟದಲ್ಲಿ ಸುದೀಪ್
ಬೆಂಗಳೂರು: ಇತ್ತೀಚಿಗಷ್ಟೇ ಭಾರತೀಯ ಸೇನೆಯ ಪ್ಯಾರಾ ಕಮಾಂಡೋಗಳು ಗಡಿ ರೇಖೆ ದಾಟಿ ಉಗ್ರಗಾಮಿಗಳ ಮೇಲೆ ನಿರ್ಧಿಷ್ಟ ದಾಳಿ ನಡೆಸಿದ ಹಿನ್ನಲೆಯಲ್ಲೇ, ಸುದೀಪ್ ಅಭಿನಯದ 'ಹೆಬ್ಬುಲಿ' ಚಲನಚಿತ್ರದಲ್ಲಿ ನಟ ಪ್ಯಾರಾ ಕಮಾಂಡೋ ಸಮವಸ್ತ್ರ ತೊಟ್ಟಿರುವ ಫೋಟೋಗಳು ಸೋರಿಹೋಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕಿಚ್ಚು ಹಚ್ಚಿವೆ.
ಭಾರತೀಯ ಸೇನೆಯ ಈ ವಿಶೇಷ ದಳ, ಅತಿ ಸೂಕ್ಷ್ಮ ಮತ್ತು ಕ್ಲಿಷ್ಟಕರವಾದ ಸನ್ನಿವೇಶಗಳಲ್ಲಿ ಹೋರಾಡುವ ಛಾತಿ ಪಡೆದಿದೆ. ಭಯೋತ್ಪಾದಕ ದಾಳಿ, ಒತ್ತೆಯಾಳು ಪ್ರಕರಣಗಳು ಮುಂತಾದ ಸನ್ನಿವೇಶಗಳಲ್ಲಿ ಹೋರಾಡಲು ಪ್ಯಾರಾ ಕಮಾಂಡೋಗಳು ಸದಾ ಸನ್ನದ್ಧರಾಗಿರುತ್ತಾರೆ.
ಈ ಮೊದಲೇ ವರದಿಯಾದಂತೆ ಸುದೀಪ್ ಇದೆ ಮೊದಲ ಬಾರಿ ಸೇನಾಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸೋರಿಕೆ ಫೋಟೋ ಅಭಿಮಾನಿಗಳ ನಡುವೆ ಅತಿ ಹೆಚ್ಚು ಚರ್ಚಿತ ವಿಷಯವಾಗಿದ್ದು, ಸಿನೆಮಾದಲ್ಲಿ ಹೆಚ್ಚಿನ ಸೇನಾ ಆಕ್ಷನ್ ದೃಶ್ಯಗಳಾಗಿ ಕೂಡ ಎದುರು ನೋಡುತ್ತಿದ್ದಾರೆ.
ಈಮಧ್ಯೆ 'ಹೆಬ್ಬುಲಿ' ಚಿತ್ರೀಕರಣ ಭರದಿಂದ ಸಾಗುತ್ತಿದೆ. ಮಾತಿನ ಭಾಗದ ಚಿತ್ರೀಕರಣ ಇನ್ನು ಹತ್ತು ದಿನಗಳಲ್ಲಿ ಸಂಪೂರ್ಣಗೊಳ್ಳಲಿದ್ದು, ನಂತರ ಹಾಡುಗಳ ಚಿತ್ರೀಕರಣ ಮುಂದುವರೆಯಲಿದೆ. ಸದ್ಯಕ್ಕೆ ಬಿಗ್ ಬಾಸ್-4 ಚಿತ್ರೀಕರಣದಲ್ಲಿ ಕೂಡ ನಿರತರಾಗಿರುವ ಸುದೀಪ್, ಚಿತ್ರತಂಡದೊಂದಿಗೆ ಸ್ವಿಟ್ಸರ್ ಲ್ಯಾಂಡ್ ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದುಬಂದಿದೆ.
ರವಿಶಂಕರ್, ಕಬೀರ್ ದುಹಾನ್ ಸಿಂಗ್, ರವಿ ಕಿಶನ್ ಮಾತು ಚಿಕ್ಕಣ್ಣ ತಾರಾಗಣದ ಭಾಗವಾಗಿದ್ದು, ಅಮಲಾ ಪಾಲ್ ನಾಯಕ ನಟಿ. ರವಿಚಂದ್ರನ್ ಸುದೀಪ್ ಅವರ ಸಹೋದರನಾಗಿ ಕಾಣಿಸಿಕೊಳ್ಳುತ್ತಿದ್ದು, ಅರ್ಜುನ್ ಜನ್ಯ ಅವರ ಸಂಗೀತ ಚಿತ್ರಕ್ಕಿದೆ.