ಸಿನಿಮಾ ಸುದ್ದಿ

ನಿರ್ದೇಶನಕ್ಕೆ ಹಿಂದಿರುಗಿದ ಗೀತರಚನಕಾರ ನಾಗೇಂದ್ರ ಪ್ರಸಾದ್

Guruprasad Narayana
ಬೆಂಗಳೂರು: ಖ್ಯಾತ ಗೀತರಚನಾಕಾರ, ಸಂಭಾಷಣಕಾರ ನಾಗೇಂದ್ರ ಪ್ರಸಾದ್ ಮತ್ತೆ ನಿರ್ದೇಶಕನ ಟೋಪಿ ತೊಟ್ಟಿದ್ದಾರೆ. 
ಇನ್ನು ಹೆಸರಿಡದ ಚಿತ್ರಕ್ಕೆ ಅಕ್ಟೋಬರ್ 17 ರಿಂದಲೇ ಮೌನವಾಗಿ ಕೆಲಸ ಪ್ರಾರಂಭಿಸಿದ್ದಾರೆ ನಾಗೇಂದ್ರ ಪ್ರಸಾದ್. "ನಾನು ಹಾಸನದ ಅರಕಲುಗೂಡಿನಲ್ಲಿ ಚಿತ್ರೀಕರಣ ಪ್ರಾರಂಭಿಸಿದ್ದೇವೆ" ಎನ್ನುವ ನಿರ್ದೇಶಕ ಚಿತ್ರದಲ್ಲಿ ಶುಭ ಪೂಂಜ ನಟಿಸಲಿದ್ದು ಜೊತೆಗೆ ಹಲವು ಹೊಸಬರನ್ನು ಪರಿಚಯಿಸಲಿದ್ದಾರಂತೆ. "ದೀಪಕ್ ಈ ಸಿನೆಮಾದ ಮೂಲಕ ಪಾದಾರ್ಪಣೆ ಮಾಡಲಿದ್ದಾರೆ ಮತ್ತು ಇನ್ನು ಬಿಡುಗಡೆಯಾಗದ 'ಮಂಡ್ಯ ಟು ಮುಂಬೈ' ಸಿನೆಮಾದಲ್ಲಿ ನಟಿಸಿರುವ ಅಮೃತ ರಾವ್ ಕೂಡ ಕಾಣಿಸಿಕೊಳ್ಳಲಿದ್ದಾರೆ" ಎನ್ನುತ್ತಾರೆ ಪ್ರಸಾದ್. ನಿರ್ದೇಶಕ ಕೂಡ ಒಂದು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರಂತೆ. 
'ನಲ್ಲ' ಸಿನೆಮಾದ ಜೊತೆಗೆ ಚೊಚ್ಚಲ ಬಾರಿಗೆ ನಿರ್ದೇಶನಕ್ಕೆ ಇಳಿದ ನಾಗೇಂದ್ರ ಪ್ರಸಾದ್ ನಂತರ 'ಅಂಬಿ' ಹಾಗು 'ಮೇಘವೇ ಮೇಘವೇ' ಸಿನೆಮಾಗಳನ್ನು ನಿರ್ದೇಶಿಸಿದ್ದರು. ರವಿಚಂದ್ರನ್, ರಾಗಿಣಿ ದ್ವಿವೇದಿ ಮತ್ತು ಲಕ್ಷ್ಮಿ ರೈ ನಟಿಸಬೇಕಿದ್ದ 'ಶೃಂಗಾರ' ಎಂಬ ಸಿನೆಮಾವನ್ನು 2014 ರಲ್ಲಿ ನಿರ್ದೇಶಿಸಬೇಕಿತ್ತು ಆದರೆ ಅದು ಕಾಣದ ಕಾರಣಗಳಿಗೆ ಮುಂದುವರೆಯಲೇ ಇಲ್ಲ. 
ನೆನೆಗುದಿಗೆ ಬಿದ್ದ ಯೋಜನೆಗಳ ಬಗ್ಗೆ ಮಾತನಾಡಲು ಇಚ್ಛಿಸದ ನಾಗೇಂದ್ರ ಪ್ರಸಾದ್ "ಇದು ನಾನು ಹಿಂದಿರುಗುತ್ತಿರುವ ಸಿನೆಮಾ. ನಾನು ಕೊನೆಗೆ ನಿರ್ದೇಶಿಸಿದ್ದು 2011 ರಲ್ಲಿ 'ವಿನಾಯಕ ಗೆಳೆಯರ ಬಳಗ'" ಎನ್ನುತ್ತಾರೆ. 
ಪ್ರಸಕ್ತ ಸಿನೆಮಾ ನೈಜ ಕಥೆ ಹೊಂದಿದೆ ಎಂದು ತಿಳಿಸುವ ನಿರ್ದೇಶಕ, ಆರು ಚಿತ್ರಗೀತೆಗಳನ್ನು ಬರೆದು ಅವರೇ ಸಂಗೀತ ನೀಡಲಿದ್ದಾರಂತೆ. ಬೆಂಗಳೂರು, ತೀರ್ಥಹಳ್ಳಿ ಇನ್ನಿತರ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆಯಂತೆ. 
SCROLL FOR NEXT