'ಮುಂಗಾರು ಮಳೆ-2' ರಲ್ಲಿ ಗಣೇಶ್ ಮತ್ತು ನೇಹಾ ಶೆಟ್ಟಿ
ಬೆಂಗಳೂರು: 2006 ರಲ್ಲಿ ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿದ ಗಣೇಶ್ ಅಭಿನಯದ 'ಮುಂಗಾರು ಮಳೆ' ಮುರಿದ ದಾಖಲೆಗಳೆಷ್ಟೋ, ಗೆದ್ದ ಅಭಿಮಾನಿಗಳ ಹೃದಯಗಳೆಷ್ಟೋ! ಈಗ ಅದೇ ಮಾಂತ್ರಿಕತೆಯನ್ನು ಮರುಕಳಿಸುವ ನಿರೀಕ್ಷೆಯಲ್ಲಿದೆ ಅದೇ ಗಣೇಶ್ ಅಭಿನಯದ 'ಮುಂಗಾರು ಮಳೆ-2' ಚಿತ್ರತಂಡ.
ನಿರೀಕ್ಷೆಯ ಭಾರವನ್ನು ಒಪ್ಪಿಕೊಳ್ಳುವ ನಟ ಗಣೇಶ್ "ಈ ಸಿನೆಮಾ 'ಮುಂಗಾರು ಮಳೆ' ಸಿನೆಮಾದ ದಾಖಲೆಗಳನ್ನು ಮುರಿಯುತ್ತದೋ ಇಲ್ಲವೋ ಎಂಬುದು ಪ್ರೇಕ್ಷಕರಿಗೆ ಬಿಟ್ಟಿದ್ದು. ಆದರೆ ಉತ್ತಪ ಪ್ರದರ್ಶನದೊಂದಿಗೆ, ಒಳ್ಳೆಯ ದೃಶ್ಯಗಳೊಂದಿಗೆ, ಅತ್ಯುತ್ತಮ ಸಭಾಷಣೆಯೊಂದಿಗೆ ಉತ್ತಮ ಸಿನೆಮಾ ನೀಡಿರುವ ಭರವಸೆ ನನಗಿದೆ. ಆವಾಗ ನಾವು ಹೆಚ್ಚು ಆಳಕ್ಕೆ ಇಳಿಯಲಿಲ್ಲ ಏಕೆಂದರೆ ನಾವೇನು ಸೃಷ್ಟಿಸುತ್ತಿದ್ದೆವು ಎಂಬುದರ ಬಗ್ಗೆ ನಮಗೆ ಸಂಪೂರ್ಣ ಅರಿವಿರಲಿಲ್ಲ ಆದರೆ ಅದಕ್ಕೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆಯ ನಂತರ ನಾವೀಗ 'ಮುಂಗಾರು ಮಳೆ 2' ಮಾಡುತ್ತಿದ್ದು, ನಮಗೆ ನಿರೀಕ್ಷೆಗಳ ಬಗ್ಗೆ ಅರಿವಿದೆ" ಎಂದು ವಿವರಿಸುತ್ತಾರೆ ಗಣೇಶ್.
ನೇಹಾ ಶೆಟ್ಟಿ ಸಿನೆಮಾದ ನಾಯಕನಟಿಯಾಗಿದ್ದು, ಮಳೆ ಸಿನೆಮಾದ ಕೇಂದ್ರ ಥೀಮ್ ಆಗಿ ಉಳಿಯಲಿದೆಯಂತೆ ಮತ್ತು ಗಣೇಶ್ ಅವರ ಪಾತ್ರದ ಹೆಸರು ಪ್ರೀತಮ್ ಆಗಿಯೇ ಉಳಿಯಲಿದೆಯಂತೆ. "ಪ್ರೇಕ್ಷಕರಿಗೆ ಪಾತ್ರದ ಹೆಸರು ಪ್ರೀತಮ್ ಜೊತೆಗೆ ಸಂಬಂಧವಿದೆ ಮತ್ತು ಇದು ನನ್ನನು ಇಲ್ಲಿಯವರೆಗೂ ಕರೆದುಕೊಂಡು ಬಂದಿದೆ. ಸಿನೆಮಾಗೆ ಸಂಬಂಧಿಸಿದಂತೆ ಹಿಂದಿನದ್ದು ಯೋಗರಾಜ್ ಭಟ್ ಅವರ ನಿಲುವುಗಳಾಗಿತ್ತು ಈಗ ಶಶಾಂಕ್ ಅವರದ್ದು. ಆದರೆ ಪ್ರೀತಿ ಮತ್ತು ಭಾವನೆಗಳು ಆಗಲು ಈಗಲೂ ಒಂದೆ" ಎನ್ನುತ್ತಾರೆ ಗಣೇಶ್.
ಈಗ ಇಬ್ಬರು ಜನಪ್ರಿಯ ನಿರ್ದೇಶಕರ ಜೊತೆ ಕೆಲಸ ಮಾಡಿರುವ ಗಣೇಶ್, ಅವರಿಬ್ಬರಿಗೂ ವಿಭಿನ್ನ ರೀತಿಯ ಶಕ್ತಿ ಇದೆ ಎನ್ನುತ್ತಾರೆ "ಭಟ್ರು ಮನಮುಟ್ಟುವ ಸಂಭಾಷಣೆಗೆ ಒತ್ತು ನೀಡಿದರೆ, ಶಶಾಂಕ್ ಭಾವನೆಗಳನ್ನು ಸೆರೆ ಹಿಡಿಯಲು ಪ್ರಯತ್ನಿಸುತ್ತಾರೆ. ಅವರವರ ವಲಯಗಳಲ್ಲಿ ಇಬ್ಬರೂ ಮಾಸ್ಟರ್ ಗಳು" ಎನ್ನುತ್ತಾರೆ.
'ಮುಂಗಾರು ಮಳೆ 3' ಸಿನೆಮಾಗೂ ಸಿದ್ಧತೆಗಳು ನಡೆದಿವೆಯೇ ಎಂಬ ಪ್ರಶ್ನೆಗೆ "ಮಳೆಯಂತೆ ಮುಂಗಾರು ಮಳೆ ನಿತ್ಯ ಹಸಿರು. ಅದು ಕೂಡ ಸಾಧ್ಯವಾಗಬಹುದು" ಎನ್ನುತ್ತಾರೆ ಗಣೇಶ್. ಕಾವೇರಿ ವಿವಾದದಲ್ಲಿ ಕರ್ನಾಟಕ ಬಂದ್ ಗೆ ಬೆಂಬಲ ನೀಡಿರುವ ಚಿತ್ರತಂಡ ಸಿನೆಮಾ ಬಿಡುಗಡೆಯನ್ನು ಒಂದು ದಿನ ಮುಂದಕ್ಕೆ ಹಾಕಿದ್ದು, ಶನಿವಾರ ಸಪ್ಟೆಂಬರ್ 10 ಕ್ಕೆ ಬಿಡುಗಡೆಯಾಗಲಿದೆ.