ಸಿನಿಮಾ ಸುದ್ದಿ

ರಾಜಕೀಯದಲ್ಲಿ ನೀಡಿದ್ದ ಭರವಸೆ ಈಡೇರಿಸುವಲ್ಲಿ ವಿಫಲ: ಅಮಿತಾಭ್ ಬಚ್ಚನ್ ವಿಷಾದ

Manjula VN

ನವದೆಹಲಿ: ನಾನು ರಾಜಕೀಯಕ್ಕೆ ಸೇರಿದ್ದೇ ಭಾವನಾತ್ಮಕತೆಯಿಂದ ಆದರೆ, ಭಾವನಾತ್ಮಕತೆಗೆ ರಾಜಕೀಯದಲ್ಲಿ ಜಾಗವಿಲ್ಲ ಎಂಬ ಸತ್ಯ ರಾಜಕೀಯಕ್ಕೆ ಇಳಿದ ಮೇಲಷ್ಟೇ ತಿಳಿಯಿತು. ರಾಜಕೀಯದಲ್ಲಿ ಜನರಿಗೆ ನೀಡಿದ್ದ ಭರವಸೆ ಈಡೇರಿಸುವಲ್ಲಿ ನಾನು ವಿಫಲನಾಗಿದ್ದು ಈ ಬಗ್ಗೆ ವಿಷಾದಿಸುತ್ತೇನೆಂದು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ಹೇಳಿದ್ದಾರೆ.

ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರು ಆಪ್ತರಾಗಿದ್ದ ಅಮಿತಾಭ್ ಬಚ್ಚನ್ ಅವರು, ರಾಜಕೀಯಕ್ಕೆ ಸೇರ್ಪಡೆಗೊಳ್ಳುವುದಕ್ಕೆ ಇಷ್ಟವಿಲ್ಲದಿದ್ದರೂ, ಒತ್ತಾಯ ಮೇರೆಗೆ 1984ರಲ್ಲಿ ಅಲಹಾಬಾದ್ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಗೆಲುವನ್ನೂ ಸಾಧಿಸಿದ್ದರು. ಆದರೆ, ಮೂರು ವರ್ಷಗಳ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ರಾಜಕೀಯಕ್ಕೆ ವಿದಾಯ ಹೇಳಿದ್ದರು.

ಇದಾದ ಕೆಲ ಸಮಯದ ಬಳಿಕ ಸಮಾಜವಾದಿ ಪಕ್ಷದಲ್ಲಿದ್ದ ಅಮರ್ ಸಿಂಗ್ ಅವರಿಗೆ ಅಮಿತಾಭ್ ಬಚ್ಚನ್ ಅವರು ಆಪ್ತರಾಗಿದ್ದರು. ಸಮಾಜವಾದಿ ಪಕ್ಷ ಸೇರದಿದ್ದರೂ ಪತ್ನಿ ಜಯಾ ಬಚ್ಚನ್ ಅವರು ಸಮಾಜವಾದಿ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಇದರಂತೆ ಮತ್ತೆ ಬಚ್ಚನ್ ಅವರಿಗೆ ರಾಜಕೀಯದೊಂದಿಗಿನ ನಂಟು ಆರಂಭವಾಗಿತ್ತು.

ಇದೀಗ ರಾಜಕೀಯವಾಗಿ ಜನರಿಗೆ ನೀಡಿದ್ದ ಭರವಸೆ ಕುರಿತಂತೆ ಖಾಸಗಿ ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ವಿಷಾದ ವ್ಯಕ್ತಪಡಿಸಿರುವ ಅವರು, ಚುನಾವಣಾ ಸಂದರ್ಭದಲ್ಲಿ ಜನರಿಗೆ ಸಾಕಷ್ಟು ಭರವಸೆಗಳನ್ನು ನೀಡಿದ್ದೆ. ಆದರೆ, ಆ ಭರವಸೆಯನ್ನು ಈಡೇರಿಸುವಷ್ಟು ಸಾಮರ್ಥ್ಯ ನನ್ನಲ್ಲಿರಲಿಲ್ಲ. ಅಂದು ನಾನು ತೆಗೆದುಕೊಂಡಿದ್ದ ಕೆಲ ನಿರ್ಧಾರಗಳು ಇಂದಿಗೂ ನನ್ನ ಮನಸ್ಸಿಗೆ ನೋವುಂಟು ಮಾಡುತ್ತಿದೆ. ಜೀವನದಲ್ಲಿ ಯಾವುದಕ್ಕೆ ವಿಷಾದ ವ್ಯಕ್ತಪಡಿಸುತ್ತೀರಾ ಎಂದು ಕೇಳುವುದಾದರೆ, ನಾನು ವಿಷಾದ ವ್ಯಕ್ತಪಡಿಸುವುದು ಇದೊಂದು ವಿಚಾರದಲ್ಲಿ ಮಾತ್ರ ಎಂದು ಹೇಳಿದ್ದಾರೆ.

ಅಲಹಾಬಾದ್ ಜನರಿಗೆ ನಾನು ಸಾಕಷ್ಟು ಭರವಸೆ ನೀಡಿದ್ದೆ. ಆದರೆ, ಆ ಭರವಸೆಯನ್ನು ಈಡೇರಿಸಲು ಸಾಧ್ಯವಿಲ್ಲ. ಅಲಹಾಬಾದ್ ನಲ್ಲಿರುವ ಜನರು ನನ್ನ ವಿರುದ್ಧವಾದರೆ, ಅದು ಈ ಕಾರಣಕ್ಕೆ. ಭಾವನಾತ್ಮಕವಾಗಿ ನಾನು ರಾಜಕೀಯಕ್ಕೆ ಸೇರ್ಪಡೆಗೊಂಡಿದ್ದೆ, ನನ್ನ ಗೆಳೆಯನಿಗೆ ಸಹಾಯ ಮಾಡಲು ರಾಜಕೀಯಕ್ಕೆ ಇಳಿದಿದ್ದೆ. ಆದರೆ, ರಾಜಕೀಯದಲ್ಲಿ ಭಾವನಾತ್ಮಕತೆಗೆ ಜಾಗವಿಲ್ಲ ಎಂಬುದು ರಾಜಕೀಯಕ್ಕೆ ಇಳಿದಾಗಲೇ ಅರ್ಥವಾಗಿದ್ದು. ಭಾವನಾತ್ಮಕತೆಗಳು ರಾಜಕೀಯದಲ್ಲಿ ಕೆಲಸ ಮಾಡುವುದಿಲ್ಲ. ಹೀಗಾಗಿ ರಾಜಕೀಯಕ್ಕೆ ವಿದಾಯ ಹೇಳಿದ್ದೆ.

ರಾಜಕೀಯಕ್ಕೆ ವಿದಾಯ ಹೇಳಿದ್ದರಿಂದ ಗಾಂಧಿ ಕುಟುಂಬದ ಜೊತೆಗಿದ್ದ ನನ್ನ ಸ್ನೇಹದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಈಗಲೂ ಗಾಂಧಿ ಕುಟುಂಬದೊಂದಿಗಿನ ನನ್ನ ಸ್ನೇಹ ಹಾಗೆಯೇ ಇದೆ ಎಂದು ಹೇಳಿದ್ದಾರೆ.

SCROLL FOR NEXT