ಬೆಂಗಳೂರು: ರಕ್ಷಿತ್ ಶೆಟ್ಟಿ ಮುಖ್ಯಪಾತ್ರದಲ್ಲಿ ನಟಿಸಿರುವ 'ಕಿರಿಕ್ ಪಾರ್ಟಿ' ಚಿತ್ರತಂಡ ಕೊನೆಯ ಹಂತದ ಚಿತ್ರೀಕರಣ ಮುಗಿಸಿದೆ. ಕೊನೆಯಲ್ಲಿ ಚಿತ್ರೀಕರಣಗೊಂಡ 'ಪ್ರಯಾಣ ಹಾಡು' ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಮತ್ತು ಗೋವಾ ಒಳಗೊಂಡಂತೆ 15 ಕ್ಕೂ ಹೆಚ್ಚು ಜಾಗಗಳಲ್ಲಿ ಚಿತ್ರೀಕರಣಗೊಂಡಿದೆಯಂತೆ.
ಸಿನೆಮಾದಲ್ಲಿ ರಕ್ಷಿತ್ ಪಾತ್ರಕ್ಕೆ ಎರಡು ಛಾಯೆಗಳಿವೆಯಂತೆ - ಒಂದು ಜಾಲಿ ಕಾಲೇಜು ಯುವಕ ಮತ್ತೊಂದು ಅವರು ಅಂತಿಮ ವರ್ಷದ ವಿದ್ಯಾರ್ಥಿಯಾದ ನಂತರದ್ದು.
ನಿರ್ದೇಶಕ ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದು "#ಕಿರಿಕ್ ಪಾರ್ಟಿ #ಕೊನೆಯ ಹಂತದ ಚಿತ್ರೀಕರಣ #ರಸ್ತೆ ಚಿತ್ರೀಕರಣ ನಂತರ ಬೆಂಗಳೂರಿಗೆ" ಎಂದು ಬರೆದಿದ್ದಾರೆ.
ಹಾಡುಗಳು ಚಿತ್ರದಲ್ಲಿ ಪ್ರಮುಖ ಸನ್ನಿವೇಶಗಳಲ್ಲಿ ಮೂಡಿ ಬರಲಿವೆ ಎನ್ನುವ ನಿರ್ದೇಶಕ "ಹಾಡುಗಳು ಸಿನೆಮಾಗೆ ಮೂಡ್ ನಿರ್ಮಿಸಲಿವೆ. ಪ್ರಸಕ್ತ ಈ ಹಾಡಿಗಾಗಿ ದೀರ್ಘ ಪ್ರಯಾಣ ಬೆಳೆಸಬೇಕಿತ್ತು ಆದುದರಿಂದ ಭೂಪಟದಲ್ಲಿ ಗುರುತು ಹಾಕಿದೆವು. ಬೆಂಗಳೂರು-ಚಿಕ್ಕಮಗಳೂರು-ಕುದುರೆಮುಖ-ಕುಂದಾಪುರ-ಮರವಂತೆ. ಅಲ್ಲಿಂದ ಗೋವಾ, ಶೋಲಾಪುರ, ಹುಬ್ಬಳ್ಳಿ, ಬಳ್ಳಾರಿ, ಆಂಧ್ರ ಮತ್ತೆ ಬೆಂಗಳೂರಿಗೆ. ಹೀಗೆ 20 ಸ್ಥಳಗಳಿಗೆ ಹೋಗಿ ಬಂದೆವು. ಪಿಕ್ನಿಕ್ ರೀತಿಯಲ್ಲಿತ್ತು" ಎನ್ನುತ್ತಾರೆ ರಿಷಬ್.
ಸಿನೆಮಾದಲ್ಲಿ ಕಾರ್ ಗೆ ಪ್ರಮುಖ ಪಾತ್ರ ಇದೆ ಎಂದು ಈ ಮೊದಲೇ ಚಿತ್ರತಂಡ ಹೇಳಿತ್ತು, ಆದರೆ ಈ ಹಾಡಿನಲ್ಲಿ ಬೈಕ್ ಕಾಣಿಸಿಕೊಂಡಿದೆಯಂತೆ. "ಈ ಹಾಡು ಪೂರ್ತಿ ರಕ್ಷಿತ್ ರಾಯಲ್ ಎನ್ ಫೀಲ್ಡ್ ಓಡಿಸಿದ್ದಾರೆ. ಜೋರು ಮಳೆಯ ಮಧ್ಯೆ 2400 ಕಿಲೋ ಮೀಟರ್ ನ ಈ ಪ್ರಯಾಣದಲ್ಲಿ ಮೂರೂ ಜನ ನಮ್ಮ ಸಹಾಯಕರು ಶಶಿಕುಮಾರ್, ಪ್ರದೀಪ್ ರಾವ್ ಮತ್ತು ಕಿರಣ್ ಪಾಟೀಲ್ ಒಟ್ಟಿಗಿದ್ದರು" ಎನ್ನುತ್ತಾರೆ ರಿಷಬ್.
ರಶ್ಮಿಕಾ ಮತ್ತು ಸಂಯುಕ್ತ ಹೆಗಡೆ ಇಬ್ಬರು ಹೊಸ ನಾಯಕ ನಟಿಯರು ನಟಿಸಿದ್ದರೆ, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಕರಮ್ ಚಾವ್ಲಾ ಅವರದ್ದು ಸಿನಿಮಾಟೋಗ್ರಾಫಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics