ಲುಧಿಯಾನ: ವಾಲ್ಮೀಕಿ ಮಹರ್ಷಿ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ನಟಿ ರಾಖಿ ಸಾವಂತ್ ಅವರನ್ನು ಬಂಧಿಸಲಾಗಿದೆ ಎಂಬ ವಂದತಿಗಳಿಗೆ ಪಂಜಾಬ್ ಪೊಲೀಸರು ತೆರೆ ಎಳೆದಿದ್ದಾರೆ.
ನ್ಯಾಯಾಲಯ ಆದೇಶದಂತೆಯೇ ನಾವು ಮುಂಬೈನಲ್ಲಿರುವ ರಾಖಿ ಅವರ ಮನೆಗೆ ಹೋಗಿದ್ದೆವು. ಆದರೆ, ಅವರು ಅಲ್ಲಿ ಇರಲಿಲ್ಲ. ಹೀಗಾಗಿ ಆಕೆಯನ್ನು ಬಂಧಿಸಿಲ್ಲ ಎಂದು ಪಂಜಾಬ್ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ರಾಖಿ ಸಾವಂತ್ ಅವರನ್ನು ಬಂಧಿಸಲಾಗಿದೆ ಎಂಬ ಸುದ್ದಿ ಸುಳ್ಳು. ನ್ಯಾಯಾಲಯ ಅವರ ವಿರುದ್ಧ ಬಂಧನಾದೇಶ ಜಾರಿಗೊಳಿಸಿದೆ. ಲುಧಿಯಾನದ ಪೊಲೀಸರ್ ತಂಡ ಬಂಧನಾದೇಶ ಜಾರಿಗೊಳಿಸಲು ಮುಂಬೈಗೆ ತೆರಳಿದ್ದಾರೆ. ಆದರೆ, ಆಕೆಯನ್ನು ಬಂಧಿಸಿಲ್ಲ ಎಂದು ಲುಧಿಯಾನಾ ಉಪ ಪೊಲೀಸ್ ಆಯುಕ್ತ ಧಾರುಮನ್ ನಿಂಬಾಳೆ ಹೇಳಿದ್ದಾರೆ.
ಲುಧಿಯಾನ ಪೊಲೀಸರು ನ್ಯಾಯಾಲಯದ ಮುಂದಿನ ಆದೇಶದಂತೆ ಕ್ರಮ ಕೈಗೊಳ್ಳಲಿದ್ದಾರೆಂದು ನಿಂಬಾಳೆ ತಿಳಿಸಿದ್ದಾರೆ.
ನಿನ್ನೆಯಷ್ಟೇ ಖಾಸಗಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದ ರಾಖಿ ಸಾವಂತ್ ಅವರ ವಕ್ತಾರ, ರಾಖಿ ಪ್ರಸ್ತುತ ಪೊಲೀಸರ ಜೊತೆಯಲ್ಲಿದ್ದಾರೆ. ಪೊಲೀಸರ ಬಳಿ ಶರಣಾಗಿದ್ದಾರೆಂದು ಹೇಳಿದ್ದರು.
ಕಳೆದ ವರ್ಷ ಖಾಸಗಿ ವಾಹನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಖಿ ಸಾವಂತ್ ಅವರು ವಾಲ್ಮೀಕಿ ಸಮುದಾಯದ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವ ಹೇಳಿಕೆಯನ್ನು ನೀಡಿದ್ದರು ಎಂದು ದೂರು ದಾಖಲಾಗಿತ್ತು.
ಆ ದೂರನ್ನು ಆಧರಿಸಿ ಮಾರ್ಚ್ 9 ರಂದು ನ್ಯಾಯಾಲಯ ರಾಖಿ ಸಾವಂತ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ ಮಾಡಿತ್ತು.
ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳನ್ನು ರಾಖಿ ಸಾವಂತ್ ಅವರು ತಿರಸ್ಕರಿಸಿದ್ದು, ನಾನು ಸಲ್ಮಾನ್ ಖಾನ್ ಅಲ್ಲ. ನಾನು ರಾಖಿ ಸಾವಂತ್. ನನ್ನ ವಿರುದ್ಧ ಪ್ರಕರಣ ದಾಖಲಿಸುವುದರಿಂದ ನಿಮಗೆ ಏನೂ ಸಿಗುವುದಿಲ್ಲ. ನಾನೊಬ್ಬಳು ಸಾಮಾನ್ಯ ಹುಡುಗಿಯಾಗಿದ್ದು, ಸಮಾಜಕ್ಕಾಗಿ ಹಾಗೂ ಸಿನಿಮಾಗಳಿಗಾಗಿ ಕೆಲಸ ಮಾಡುವ ವ್ಯಕ್ತಿಯಾಗಿದ್ದೇನೆ.
ಬಾಲ್ಯದಲ್ಲಿ ನಾನು ಓದಿದ್ದನ್ನು ನಾನು ಉದಾಹರಣೆಯಾಗಿ ನೀಡಿದ್ದೆ. ಕಳ್ಳನಾಗಿದ್ದ ವಾಲ್ಮೀಕಿ ಮಮಹರ್ಷಿಯಾಗಿ ಹೇಗೆ ಪರಿವರ್ತನೆಗೊಂಡರು, ಮಿಕಾ ಜಿ ಅವರು ಹಾಗೆಯೇ ಬದಲಾವಣೆಗೊಂಡಿದ್ದಾರೆಂದು ಹೇಳಿದ್ದೆ. ಅದು ಕೇವಲ ಉದಾಹರಣೆಯಾಗಿ ನೀಡಿದ್ದೆ ಅಷ್ಟೆ. ನನ್ನ ಹೇಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ, ಈ ಮೂಲಕ ಕ್ಷಮೆಯಾಚಿಸುತ್ತೇನೆ. ವಾಲ್ಮೀಕಿ ಸಮುದಾಯದ ಸಹೋದರ ಹಾಗೂ ಸಹೋದರಿಯರಿದೆ ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನಾನು ಉದ್ದೇಶಪೂರ್ವಕವಾಗಿ ಯಾವುದನ್ನೂ ಹೇಳಿಲ್ಲ ಎಂದು ಹೇಳಿದ್ದಾರೆ.