ಸಿನಿಮಾ ಸುದ್ದಿ

ನನ್ನ ಟ್ವೀಟ್ ಗಳು ಮುಸ್ಲಿಂ ವಿರೋಧಿ ಆಗಿದ್ದರೆ ಕ್ಷಮೆ ಕೇಳಲು ಸಿದ್ಧ: ಸೋನು ನಿಗಮ್

Guruprasad Narayana
ಮುಂಬೈ: ಮುಸ್ಲಿಮರ ಪ್ರಾರ್ಥನೆ (ಆಜಾನ್) ಬಗ್ಗೆ ಮಾಡಿದ ವಿವಾದಾತ್ಮಕ ಟ್ವೀಟ್ ಗಳ ಬಗ್ಗೆ ಹಲವು ಮೂಲೆಗಳಿಂದ ವ್ಯಾಪಕ ಟೀಕೆಗಳು ಕೇಳಿಬಂದ ಒತ್ತಡದಲ್ಲಿ ಪ್ರತಿಕ್ರಿಯಿಸಿರುವ ಬಾಲಿವುಡ್ ಗಾಯಕ ಸೋನು ನಿಗಮ್, ನನ್ನ ಟ್ವೀಟ್ ಗಳು ಮುಸ್ಲಿಂ ವಿರೋಧಿಯಾಗಿದ್ದರೆ ಕ್ಷಮೆ ಕೇಳಲು ಸಿದ್ದ ಎಂದು ಬುಧವಾರ ಹೇಳಿದ್ದಾರೆ. 
ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟೀಕರಣ ನೀಡಿರುವ ನಿಗಮ್ "ನನ್ನ ಟ್ವೀಟ್ ಗಳು ಮುಸ್ಲಿಂ ವಿರೋಧಿ ಎಂದು ತಪ್ಪಾಗಿ ಹೇಳುತ್ತಿರುವವರಿಗೆ, ತಪ್ಪು ತೋರಿಸಿ ನಂತರ ನಾನು ಕ್ಷಮೆ ಕೇಳುತ್ತೇನೆ" ಎಂದು ಸವಾಲೆಸೆದಿದ್ದಾರೆ. 
ಧ್ವನಿವರ್ಧಕಗಳ ಬಗ್ಗೆ ಮಾತನಾಡಿದಾಗ ನಾನು ದೇವಾಲಯಗಳು ಮತ್ತು ಗುರುದ್ವಾರಗಳ ಬಗ್ಗೆಯೂ ಹೇಳಿದ್ದೇನೆ ಎಂದು ಕೂಡ ಅವರು ತಿಳಿಸಿದ್ದು "ಜನರೇ ಇದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಅಷ್ಟು ಕಷ್ಟವೇ? ಬಿಗಿತನವನ್ನು ಕಳೆದುಕೊಳ್ಳಿ" ಎಂದು ಕೂಡ ಹೇಳಿದ್ದಾರೆ. 
ನಿಗಮ್ ತಲೆ ಬೋಳಿಸಿದವರಿಗೆ ೧೦ ಲಕ್ಷ ರೂ ಬಹುಮಾನ ನೀಡುವುದಾಗಿ ಫತ್ವಾ ಹೊರಡಿಸಿರುವ ಪಶ್ಚಿಮ ಬಂಗಾಳದ ಮುಸ್ಲಿಂ ಧರ್ಮಗುರುವೊಬ್ಬರ ವಿರುದ್ಧ ವಾಗ್ದಾಳಿ ನಡೆಸಿರುವ ನಿಗಮ್ "ಇವೊತ್ತು ಮಧ್ಯಾಹ್ನ ೨ ಘಂಟೆಗೆ ಆಲಿಮ್ ನನ್ನ ಜಾಗಕ್ಕೆ ಬಂದು ತಲೆ ಬೋಳಿಸಲಿದ್ದಾರೆ. ಮೌಲ್ವಿ ೧೦ ಲಕ್ಷ ಸಿದ್ಧವಾಗಿ ಇಟ್ಟುಕೊಳ್ಳಿ" ಎಂದಿದ್ದಾರೆ. 
ಇಂದು ಮಧ್ಯಾಹ್ನ ಅವರು ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಅವರ ಟ್ವೀಟ್ ಗಳ ಬಗ್ಗೆ ಸ್ಪಷ್ಟೀಕರಣ ನೀಡುವ ಸಾಧ್ಯತೆಯಿದೆ. 
ಸೋಮವಾರ ಟ್ವೀಟ್ ಮಾಡಿದ್ದ ಸೋನು "ದೇವರು ಎಲ್ಲರಿಗು ಒಳ್ಳೆಯದು ಮಾಡಲಿ. ನಾನು ಮುಸ್ಲಿಂ ಅಲ್ಲ ಮತ್ತು ಆಜಾನ್ ನಿಂದ ನಾನು ಬೆಳಗ್ಗೆಯೇ ಏಳಬೇಕಿದೆ. ಈ ಒತ್ತಾಯಪೂರ್ವಕ ಧಾರ್ಮಿಕ ಭಾವನೆ ಭಾರತದಲ್ಲಿ ಕೊನೆಗಾಣುವುದೆಂದು" ಎಂದು ಬರೆದಿದ್ದರು. ನಂತರ "ಇಸ್ಲಾಮ್ ಧರ್ಮಕ್ಕೆ ರೂಪು ಕೊಟ್ಟಾಗ ಮೊಹಮದ್ ಅವರ ಬಳಿ ವಿದ್ಯುಚ್ಛಕ್ತಿ ಇರಲಿಲ್ಲ. .. ಎಡಿಸನ್ ಕಂಡು ಹಿಡಿದ ನಂತರ ಈ ಕೂಗನ್ನು ನಾನೇಗೆ ಕೇಳಿಸಿಕೊಳ್ಳಬೇಕು" ಎಂದು ಧ್ವನಿವರ್ಧಕದ ಮೂಲಕ ಮಾಡುವ ಮುಸ್ಲಿಂ ಪ್ರಾರ್ಥನೆ ಕಿರಿಕಿರಿಯುಂಟು ಮಾಡುತ್ತಿದೆ ಎಂಬ ರೀತಿಯಲ್ಲಿ ಬರೆದಿದ್ದರು. 
"ಯಾವುದೇ ಧರ್ಮವನ್ನು ಅನುಸರಿಸದವರಿಗೆ ದೇವಾಲಯವಾಗಲಿ, ಗುರುದ್ವಾರವಾಗಲಿ ವಿದ್ಯುಚ್ಛಕ್ತಿ ಬಳಸಿ ಎಬ್ಬಿಸುವುದನ್ನು ನಾನು ನಂಬುವುದಿಲ್ಲ. .? ಪ್ರಾಮಾಣಿಕವಲ್ಲವೇ? ನಿಜವಲ್ಲವೇ? ಗುಂಡಾಗಿರಿ ನಿಲ್ಲಿಸಿ" ಎಂದು ಕೂಡ ಅವರು ಟ್ವೀಟ್ ಮಾಡಿದ್ದರು. 
ಇದರ ಬಗ್ಗೆ ಪರಿಶೀಲಿಸುವಂತೆ ಮನವಿ ಮಾಡಿ ಈ ಟ್ವೀಟ್ ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಕೂಡ ಟ್ಯಾಗ್ ಮಾಡಿದ್ದರು. 
"ಪ್ರಿಯ ದೇವೇಂದ್ರ ಫಡ್ನವಿಸ್, ದಯವಿಟ್ಟು ಇದನ್ನು ಗಮನಿಸಿ ಮತ್ತು ಕಾನೂನುಬಾಹಿರವಾಗಿ ಆಜಾನ್ ಕೂಗುವ ಮತ್ತಿತರ ಅಂತಹ ಚಟುವಟಿಕೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ಸೂಚಿಸಿ ನಮಗೆ ಸಹಾಯ ಮಾಡಿ" ಎಂದು ಕೂಡ ಅವರು ಟ್ವೀಟ್ ಮಾಡಿದ್ದರು. 
ಮುಸ್ಲಿಂ ಸಮುದಾಯಕ್ಕೆ ಸೇರಿದ ಕೆಲವರು ಒಳಗೊಂಡಂತೆ ಇತರ ವರ್ಗಗಳಿಂದಲೂ ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತಲ್ಲದೆ, ಅವರ ವಿರುದ್ಧ ದೂರು ನೀಡಲು ಕೂಡ ಕೆಲವರು ಮುಂದಾಗಿದ್ದಾರೆ. 
SCROLL FOR NEXT