ಖ್ಯಾತ ಬರಹಗಾರ, ಬಾಲಿವುಡ್ ಗೀತರಚನಾಕಾರ ಜಾವೇದ್ ಅಕ್ತರ್
ಮುಂಬೈ: ದೇವರನ್ನು ಪೂಜಿಸುವುದು ಮತ್ತು ಪ್ರಾರ್ಥಿಸುವುದು ನನಗೆ ಸರಿ ಎನ್ನಿಸುತ್ತದೆ ಆದರೆ ಅದು ಮತ್ತೊಬ್ಬರಿಗೆ ತೊಂದರೆ ನೀಡಬಾರದು ಎಂದು ಖ್ಯಾತ ಬರಹಗಾರ, ಬಾಲಿವುಡ್ ಗೀತರಚನಾಕಾರ ಜಾವೇದ್ ಅಕ್ತರ್ ಹೇಳಿದ್ದಾರೆ.
ಮುಸ್ಲಿಮರ ಪ್ರಾರ್ಥನೆ ಆಜಾನ್ ವೇಳೆಯಲ್ಲಿ ಧ್ವನಿವರ್ಧಕ ನಿಷೇಧಿಸಬೇಕು ಎಂದು ಬಾಲಿವುಡ್ ಗಾಯಕ ಸೋನು ನಿಗಮ್ ಅವರ ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, ಶುಕ್ರವಾರ ರಾತ್ರಿ ದಾದಾಸಾಹೇಬ್ ಫಾಲ್ಕೆ ಶ್ರೇಷ್ಠ ಪ್ರಶಸ್ತಿ ೨೦೧೭ 'ಅತ್ಯುತ್ತಮ ಕವಿ, ಗೀತರಚನಾಕಾರ ಮತ್ತು ಚಿತ್ರಕಥೆಗಾರ' ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ ಅಕ್ತರ್ ಪ್ರತಿಕ್ರಿಯಿಸಿದ್ದಾರೆ. "ನನಗೆ ಗೊತ್ತಿರುವಂತೆ, ಅದು ಮಸೀದಿ, ಮಂದಿರ, ಚರ್ಚ್ ಅಥವಾ ಗುರುದ್ವಾರವಾಗಲಿ ನೀವು ನಿಮ್ಮ ಪ್ರಾರ್ಥನೆ ಮಾಡಿ ಆದರೆ ಅದು ಮತ್ತೊಬನಿಗೆ ತೊಂದರೆ ನೀಡಬಾರದು" ಎಂದು ಅಕ್ತರ್ ಹೇಳಿದ್ದಾರೆ.
ನಾನು ಮುಸ್ಲಿಂ ಅಲ್ಲದಿದ್ದರೂ ಬೆಳಗ್ಗಿನ ಪ್ರಾರ್ಥನಾ ಸಮಯಕ್ಕೆ (ಅಜಾನ್) ಏಳಬೇಕಿದೆ. ಇಂತಹ ಒತ್ತಾಯಪೂರ್ವಕ ಧಾರ್ಮಿಕ ಆಚರಣೆ ಭಾರತದಲ್ಲಿ ಯಾವಾಗ ಕೊನೆಯಾಗಲಿದೆ ಎಂದು ಸೋನು ನಿಗಮ್ ಏಪ್ರಿಲ್ 17ರ ಬೆಳಗ್ಗೆ 5.25ಕ್ಕೆ ಟ್ವೀಟ್ ಮಾಡಿದ್ದರು. ಏಪ್ರಿಲ್ 17ರ ಬೆಳಗ್ಗೆ ಸೋನು ಮಾಡಿದ್ದ ಸರಣಿ ಟ್ವೀಟ್‌ಗಳು ಟ್ವಿಟರ್ ನಲ್ಲಿ ಹೆಚ್ಚು ಚರ್ಚೆಗೊಳಗಾಗಿತ್ತು.