ಸಿಎಂ ಸಿದ್ದರಾಮಯ್ಯ ಅವರಿಂದ ರಾಜ್ಯ ಚಲನ ಚಿತ್ರ ಪ್ರಶಸ್ತಿ ಪ್ರಧಾನ
ಬೆಂಗಳೂರು: ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರಗಳಿಗೆ ಗರಿಷ್ಠ ಟಿಕೆಟ್ ದರ ರು. 200 ಇರಬೇಕು ಎಂದು ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಘೋಷಿಸಿದ್ದೇನೆ. ಈ ಕುರಿತು ಒಂದೆರಡು ದಿನಗಳಲ್ಲಿ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು ಕನ್ನಡ ಚಿತ್ರಗಳು ಮಲ್ಟಿಪ್ಲೆಕ್ಸ್‌ಗಳಲ್ಲಿ ಸಂಜೆ 4.30 ಮತ್ತು 7.30ಕ್ಕೆ ಪ್ರದರ್ಶನಗೊಳ್ಳಬೇಕು, ಮುಂದಿನ ವರ್ಷದಿಂದ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಏಕ ಕಾಲದಲ್ಲಿ ಡಾ.ರಾಜಕುಮಾರ್ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ರಾಜ್ಯದಲ್ಲಿ ಹೆಚ್ಚು ಕನ್ನಡ ಚಿತ್ರಗಳನ್ನು ಪ್ರದರ್ಶಿಸುವ ಪ್ರದರ್ಶಕರಿಗೂ ಮುಂದಿನ ವರ್ಷದಿಂದ ಪ್ರಶಸ್ತಿ ನೀಡಲಾಗುವುದು ಎಂದು ಹೇಳಿದ ಅವರು, ದೆಹಲಿಯ ಕನ್ನಡ ಸಂಘದ ಆವರಣದಲ್ಲಿ ಡಾ.ರಾಜಕುಮಾರ್ ಅವರ ಪ್ರತಿಮೆ ಸ್ಥಾಪನೆ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜೀವಿತಾವಧಿ ಸಾಧನೆಗಾಗಿ ಹಿರಿಯರಾದ ಆದವಾನಿ ಲಕ್ಷ್ಮೀದೇವಿ ಅವರಿಗೆ ಡಾ.ರಾಜಕುಮಾರ್ ಪ್ರಶಸ್ತಿ, ಕೆ.ವಿ. ರಾಜು ಅವರಿಗೆ ಪುಟ್ಟಣ್ಣ ಕಣಗಾಲ್ ಮತ್ತು ಕೆ. ಚಿನ್ನಪ್ಪ ಅವರಿಗೆ ಡಾ.ವಿಷ್ಣುವರ್ಧನ್ ಪ್ರಶಸ್ತಿ ಪ್ರದಾನ ಮಾಡಲಾಯಿತು.