ಬೆಂಗಳೂರು: 'ತಾರಕ್' ಸಿನೆಮಾದಲ್ಲಿ ಶಾನ್ವಿ ಶ್ರೀವಾಸ್ತವ ನಟಿಸಲಿದ್ದಾರೆ ಎಂಬ ವದಂತಿಗಳು ಈಗ ಧೃಢವಾಗಿದ್ದು, ಸೋಮವಾರದಿಂದ ಅವರು ಸೆಟ್ ಸೇರಲಿದ್ದಾರೆ.
'ಚಂದ್ರಲೇಖಾ' ಸಿನೆಮಾದಿಂದ ಕನ್ನಡ ಚಿತ್ರರಂಗ ಪ್ರವೇಶಿಸಿದ ಶಾನ್ವಿ ನಂತರ ಯಶ್ ಎದುರು 'ಮಾಸ್ಟರ್ ಪೀಸ್'ನಲ್ಲಿ ನಟಿಸಿದ್ದರು. ಅವರ ಇತರ ಸಿನೆಮಾಗಳು 'ಭಲೇ ಜೋಡಿ', 'ಸುಂದರಾಂಗ ಜಾಣ' ಮತ್ತು ಇನ್ನು ಬಿಡುಗಡೆಯಾಗಬೇಕಿರುವ 'ಸಾಹೇಬ'. ಸಾಹೇಬ ಸಿನೆಮಾದಲ್ಲಿ ಚೊಚ್ಚಲ ನಟ ಮನೋರಂಜನ್ ಜೊತೆಗೆ ಶಾನ್ವಿ ನಟಿಸಿದ್ದಾರೆ. ಶ್ರೀಮುರಳಿ ಜೊತೆಗೆ 'ಮಫ್ತಿ' ಹಾಗು ರಕ್ಷಿತ್ ಶೆಟ್ಟಿ ಜೊತೆಗೆ 'ಅವನೇ ಶ್ರೀಮನ್ ನಾರಾಯಣ'ದಲ್ಲಿಯೂ ಶಾನ್ವಿ ನಟಿಸುತ್ತಿದ್ದಾರೆ,.
ಈಗಾಗಲೇ ಚಿತ್ರೀಕರಣ ನಡೆಸುತ್ತಿರುವ 'ತಾರಕ್'ನಲ್ಲಿ ಮೊದಲ ಬಾರಿಗೆ ಶಾನ್ವಿ ನಟ ದರ್ಶನ್ ಎದುರು ನಟಿಸಲಿದ್ದಾರೆ. ಪ್ರಕಾಶ್ ಜಯರಾಮ್ ನಿರ್ದೇಶನದ ಈ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿರುವುದಕ್ಕೆ ನಟಿ ಸಂತಸವನ್ನು ವ್ಯಕ್ತಪಡಿಸುತ್ತಾರೆ.
"ಕನ್ನಡ ಚಿತ್ರರಂಗ ನನ್ನನ್ನು ಅಪ್ಪಿಕೊಳ್ಳುತ್ತಿರುವುದಕ್ಕೆ ನನಗೆ ಅತೀವ ಸಂತಸವಾಗಿದೆ. ನಾನು ಇಲ್ಲಿ ನಟನೆ ಪ್ರಾರಂಭಿಸಿದಾಗ, ಈ ಮಟ್ಟಕ್ಕೆ ಬೆಳೆಯುತ್ತೇನೆ ಎಂದೆಣಿಸಿರಲಿಲ್ಲ. ಉತ್ತರದಿಂದ ಬಂದಿರುವ ನನಗೆ ಇದು ಗೌರವ. ನನಗೆ ಬಂದಿರುವ ಅವಕಾಶಗಳು, ಕನ್ನಡ ಪ್ರೇಕ್ಷಕರು ನನ್ನನ್ನು ಕಾಣುವ ಬಗೆಯಿಂದ ಕರ್ನಾಟಕ ಈಗ ನನಗೆ ಎರಡನೇ ಮನೆಯಾಗಿದ್ದು, ನಾನು ಹೆಚ್ಚು ಕನ್ನಡತಿಯಾಗಿದ್ದೇನೆ. ಈಗೆ ಬೇರೆಲ್ಲೆಡೆಗಿಂತ ಇಲ್ಲೇ ಹೆಚ್ಚು ವಾಸಿಸುತ್ತಿದ್ದೇನೆ. ಈಗ ನನಗೆ ಬೆಂಗಳೂರು ನೆಚ್ಚಿನ ತಾಣವಾಗಿದೆ ಎಂದು ನನ್ನ ಕುಟುಂಬಕ್ಕೆ ಮತ್ತು ಇತರರಿಗೂ ತಿಳಿದಿದೆ" ಎನ್ನುತ್ತಾರೆ.
'ತಾರಕ್' ನಲ್ಲಿ ಅನಿವಾಸಿ ಭಾರತೀಯ ಯುವತಿಯಾಗಿ ಕಾಣಿಸಿಕೊಳ್ಳುತ್ತಿರುವ ಶಾನ್ವಿ ತಮ್ಮ ನೋಟಕ್ಕೆ ಹಲವು ಬದಲಾವಣೆ ಮಾಡಿಕೊಂಡಿದ್ದಾರಂತೆ. "ನನ್ನ ಹಿಂದಿನ ಸಿನೆಮಾಗಳಿಗಿಂತಲೂ ವಿಭಿನ್ನವಾಗಿ ಇಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಸಿನೆಮಾದಲ್ಲಿ ಚಲನಶೀಲ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದು, ನನ್ನ ನಟನ ಶೈಲಿ ಮತ್ತು ಆಂಗಿಕ ಅಭಿನಯದ ಬಗ್ಗೆ ಇದರಲ್ಲಿ ಹೊಸ ಪ್ರಯೋಗ ಮಾಡುತ್ತಿದ್ದೇನೆ. ವೀಕ್ಷಕರು ನನ್ನನ್ನು ವಿಭಿನ್ನವಾಗಿ ಕಾಣಲಿದ್ದಾರೆ" ಎನ್ನುತ್ತಾರೆ ಶಾನ್ವಿ.
ದುಷ್ಯಂತ್ ನಿರ್ಮಾಣದ ಈ ಚಿತ್ರದಲ್ಲಿ ಶ್ರುತಿ ಹರಿಹರನ್ ಕೂಡ ನಾಯಕ ನಟಿ. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಎ ವಿ ಕೃಷ್ಣಕುಮಾರ್ ಸಿನೆಮ್ಯಾಟೋಗ್ರಾಫರ್.