ಸಿನಿಮಾ ಸುದ್ದಿ

ಲೈಂಗಿಕ ದೌರ್ಜನ್ಯದ ನಂತರ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತೆ?: ಕೇರಳ ಸಿಎಂಗೆ ನಟಿ ಪ್ರಶ್ನೆ

Lingaraj Badiger
ತಿರುವನಂತಪುರ: ಅಪಹರಣ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ದಕ್ಷಿಣ ಭಾರತದ ಖ್ಯಾತ ನಟಿ, ಘಟನೆಯ ನಂತರ ತಾವು ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರನ್ನು ಪ್ರಶ್ನಿಸಿದ್ದಾರೆ.
ತಮ್ಮ ವಿರುದ್ಧ ಶಾಸಕ ಶಾಸಕ ಪಿ.ಸಿ ಜಾರ್ಜ್ ಅವರು ಅಸಭ್ಯ ಭಾಷೆ ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಿಎಂಗೆ ಪತ್ರ ಬರೆದಿದ್ದು, ಅದನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣ ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿರುವಾಗ ಘಟನೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ ಶಾಸಕ ಜಾರ್ಜ್ ಅವರ  ಉದ್ದೇಶ ಮತ್ತು ಪರಿಣಾಮಗಳನ್ನು ನಟಿ ಪ್ರಶ್ನಿಸಿದ್ದಾರೆ.
ಒಂದು ವೇಳೆ ನಟಿ ಮೇಲೆ ಗಂಭೀರ ದೌರ್ಜನ್ಯ ನಡೆದಿದ್ದರೆ ಎರಡನೇ ದಿನವೇ ಚಿತ್ರೀಕರಣದಲ್ಲಿ ಭಾಗವಹಿಸಲು ಹೇಗೆ ಸಾಧ್ಯ ಎಂದು ಶಾಸಕ ಜಾರ್ಜ್ ಅವರು ಪ್ರಶ್ನಿಸಿದ್ದರು. ಶಾಸಕ ಈ ಹೇಳಿಕೆಯಿಂದ ಆಕ್ರೋಶಗೊಂಡಿರುವ ನಟಿ, ಕೆಲಸಕ್ಕೆ ಹೋಗುವ ಬದಲು ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತೆ ಎಂದು ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ಈ ಸಂಬಂಧ ಕೇರಳ ಮಹಿಳಾ ಆಯೋಗ ಈಗಾಗಲೇ ಶಾಸಕ ಪಿ.ಪಿ.ಜಾರ್ಜ್ ಅವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ.
ಕಳೆದ ಫೆಬ್ರುವರಿಯಲ್ಲಿ ಮಲೆಯಾಳಂ ಚಿತ್ರನಟಿಯೊಬ್ಬರನ್ನು ಅಪಹರಿಸಿ, ಕಾರಿನಲ್ಲಿ ಹಲ್ಲೆ ನಡೆಸಲಾಗಿತ್ತು. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಶಾಸಕ ಜಾರ್ಜ್ ಅವರು ವ್ಯಕ್ತಪಡಿಸಿದ ಅಭಿಪ್ರಾಯವು ಮಹಿಳೆಯರ ಘನತೆಗೆ ಚ್ಯುತಿ ತರುವಂತಿತ್ತು ಎಂಬ ಆರೋಪದ ಮೇಲೆ ಮಹಿಳಾ ಆಯೋಗ ಪ್ರಕರಣವನ್ನು ದಾಖಲಿಸಿಕೊಂಡಿದೆ.
ನಟಿಗೆ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಖ್ಯಾತ ನಟ ದಿಲೀಪ್, ಪ್ರಮುಖ ಆರೋಪಿ ಪಲ್ಸರ್ ಸುನಿ ಹಾಗೂ ಇತರ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
SCROLL FOR NEXT