ಮುಂಗಾರು ಮಳೆ ಚಿತ್ರದ ಮೂಲಕ ಕನ್ನಡದ ಚಿತ್ರರಂಗದ ದಿಕ್ಕು ಬದಲಿಸಿದ್ದ ಸ್ಟಾರ್ ನಿರ್ದೇಶಕ ಯೋಗರಾಜ್ ಭಟ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಜೋಡಿಯ ಮತ್ತೊಂದು ಚಿತ್ರ ಮುಗುಳುನಗೆ ಸೆಪ್ಟೆಂಬರ್ 1ಕ್ಕೆ ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಲಿದೆ.
ಮುಂಗಾರು ಮಳೆ ಮತ್ತು ಗಾಳಿಪಟ ಮೂಲಕ ಈ ಸ್ಟಾರ್ ಜೋಡಿ ಮೋಡಿ ಮಾಡಿತ್ತು. ಇದೀಗ 10 ವರ್ಷಗಳ ಬಳಿಕ ಇವರಿಬ್ಬರು ಒಂದಾಗಿದ್ದು ಅಭಿಮಾನಿಗಳಿಗೆ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಿವೆ.
ಸದ್ಯ ಮುಗುಳುನಗೆ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು ಕೇಳುಗರ ಮನತಣಿಸುತ್ತಿದೆ. ಚಿತ್ರದಲ್ಲಿ ನಾಲ್ಕು ನಾಯಕರಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಗೆ ಅಮೂಲ್ಯ, ಆಶಿಕಾ ರಂಗನಾಥ್, ನಿಖಿತಾ ನಾರಾಯಣ್ ಮತ್ತು ಅಪೂರ್ವ ಅರೋರಾ ಸಾಥ್ ನೀಡಿದ್ದಾರೆ. ಇನ್ನು ಜಗ್ಗೇಶ್, ರಂಗಾಯಣ ರಘು, ಧರ್ಮಣ್ಣ ಮತ್ತು ಅಚ್ಯುತ್ ರಾವ್ ಜೋಡಿ ಕಾಮಿಡಿ ರಂಗು ಹೆಚ್ಚಿಸಲಿದೆ.