ಬೆಂಗಳೂರು: ಹಣ ಕಟ್ಟಿಸಿಕೊಂಡು ನಿಗದಿತ ಅವಧಿಯಲ್ಲಿ ವಾಪಸ್ ಕೊಡದೆ ವಂಚಿಸಿದ ಆರೋಪದಡಿ ಮಲ್ಲೇಶ್ವರದ ‘ಪ್ರಸಿದ್ಧಿ’ ಚಿಟ್ ಫಂಡ್ ಸಂಸ್ಥೆಯ ವಿರುದ್ಧ ನಟಿ ಸಂಜನಾ ಅವರು ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಎರಡು ವರ್ಷಗಳಿಂದ ನಿರಂತರವಾಗಿ ಸಂಸ್ಥೆಗೆ ತಿಂಗಳ ಕಂತಿನಲ್ಲಿ ರು.26 ಲಕ್ಷ ಕಟ್ಟಿದ್ದೆ. ಆದರೆ, ಸಂಸ್ಥೆಯ ಸಂಸ್ಥಾಪಕರಾದ ಮಹೇಶ್ ಹಾಗೂ ಅವರ ಪತ್ನಿ ನಿರೂಪಮಾ ಏಪ್ರಿಲ್‌ನಿಂದಲೇ ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕಿ ನ್ಯಾಯ ಕೊಡಿಸಬೇಕು’ ಎಂದು ದೂರಿನಲ್ಲಿ ಸಂಜನಾ ಮನವಿ ಮಾಡಿದ್ದಾರೆ.
ನಾನು ಸೇರಿ 40 ಮಂದಿ ಈ ಸಂಸ್ಥೆಯಲ್ಲಿ ರು. 18 ಕೋಟಿಯಷ್ಟು ಹಣ ಹೂಡಿಕೆ ಮಾಡಿದ್ದೇವೆ. ಮಲ್ಲೇಶ್ವರದಲ್ಲಿರುವ ಸಂಸ್ಥೆಯ ಕಚೇರಿಗೆ ಬೀಗ ಹಾಕಿ, ಆ ಹಣದೊಂದಿಗೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂಸ್ಥೆ ಹೂಡಿಕೆಗೆ ಉತ್ತಮವೆಂದು ನೋಂದಣಿ ಇಲಾಖೆಯು ಪ್ರಮಾಣ ಪತ್ರ ನೀಡಿತ್ತು. ಅದನ್ನು ನಂಬಿ ಹಣ ಕಟ್ಟಿದ್ದೆವು. ಪ್ರತಿ ತಿಂಗಳು ಸಂಸ್ಥೆಯ ಸಿಬ್ಬಂದಿಯೇ ಮನೆಗೆ ಬಂದು ಹಣ ಪಡೆದುಕೊಂಡು ಹೋಗುತ್ತಿದ್ದರು. ಏಪ್ರಿಲ್‌ನಿಂದ ಬರುವುದನ್ನೇ ನಿಲ್ಲಿಸಿದ್ದರು. ಆ ಬಗ್ಗೆ ವಿಚಾರಿಸಿದಾಗ ಮಹೇಶ್ ಹಾಗೂ ನಿರೂಪಮಾ, ನಮ್ಮನ್ನು ವಂಚಿಸಿದ್ದು ಗೊತ್ತಾಯಿತು ಎಂದು ಅವರು ಹೇಳಿದ್ದಾರೆ.