ಬೆಂಗಳೂರು: "ಕಿರಿಕ್" ಹುಡುಗಿ ರಶ್ಮಿಕಾ ಮಂದಣ್ಣ ಚಿತ್ರರಂಗದಲ್ಲಿ ಅತ್ಯಂತ ಬಿಸಿ ನಟಿಯಾಗಿದ್ದು, ಕಿರಿಕ್ ಪಾರ್ಟಿ ಬಳಿಕ ರಶ್ಮಿಕಾ ಮೂರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ಪ್ರಸ್ತುತ ಕನ್ನಡದಲ್ಲಿ ಮೂರು ಚಿತ್ರಗಳಲ್ಲಿ ಅಭಿನಯಿಸುತ್ತಿರುವ ನಟಿ ರಶ್ಮಿಕಾ, ಪುನೀತ್ ಅಭಿನಯದ ಅಂಜನೀ ಪುತ್ರ ಚಿತ್ರದ ಚಿತ್ರೀಕರಣರದಲ್ಲಿ ತೊಡಗಿದ್ದಾರೆ. ಇತ್ತೀಚೆಗಷ್ಟೇ ಅಂಜನೀ ಪುತ್ರ ಚಿತ್ರತಂಡ ಸ್ಕಾಟ್ಲೆಂಡ್ ನಲ್ಲಿ ಹಾಡೊಂದರ ಚಿತ್ರೀಕರಣ ಮುಗಿಸಿಕೊಂಡು ಬಂದಿದೆ. ಈ ಬಗ್ಗೆ ಸಂತೋಷದಿಂದಲೇ ಮಾತನಾಡಿರುವ ರಶ್ಮಿಕಾ, ಅಂಜನೀ ಪುತ್ರ ಚಿತ್ರದ ಚಿತ್ರೀಕರಣ ಸುಸೂತ್ರವಾಗಿ ನಡೆಯುತ್ತಿದೆ. ಪುನೀತ್ ಸರ್ ಜೊತೆ ಅಭಿನಯಿಸುವುದು ನಿಜಕ್ಕೂ ನನ್ನ ಅದೃಷ್ಟವೇ ಸರಿ. ಹಾಡಿನಲ್ಲಿ ನನ್ನ ಪಾತ್ರ ಬಹಳ ಚಿಕ್ಕದು. ಹೀಗಾಗಿ ಅವರೊಂದಿಗೆ ಹೆಚ್ಚೆಚು ಹೆಜ್ಜೆಹಾಕಲು ಸಾಧ್ಯವಾಗಲಿಲ್ಲ. ಹಾಡಿನ ಚಿತ್ರೀಕರಣ ನಿಜಕ್ಕೂ ಒಳ್ಳೆಯ ಅನುಭವ ನೀಡಿತು.
ಪುನೀತ್ ರಾಜ್ ಕುಮಾರ್ ಅವರೊಂದಿಗೆ ಅಭಿನಯಿಸುವುದು ಕಷ್ಟ ಎಂದು ಭಾವಿಸುತ್ತಾರೆ. ಕೆಲವರು ಹೆದರುತ್ತಾರೆ. ಬಹುಶಃ ಅವರು ಸ್ಟಾರ್ ನಟ ಎಂಬ ಹಿನ್ನಲೆಯಲ್ಲಿ ಈ ಭಯವಿರಬಹುದು. ಆದರೆ ನಿಜಕ್ಕೂ ಪುನೀತ್ ಸರ್ ಎಲ್ಲರೊಂದಿಗೂ ಬೆರೆಯುತ್ತಾರೆ. ಆದರೆ ಅವರೊಂದಿಗೆ ಅವರಿಗೆ ಸರಿಸಮಾನವಾಗಿ ಡ್ಯಾನ್ಸ್ ಮಾಡುವುದು ಯಾರಿಗೂ ಸಾಧ್ಯವಿಲ್ಲ ಎಂದು ರಶ್ಮಿಕಾ ಹೇಳಿದ್ದಾರೆ. ಇನ್ನು ಅಂಜನೀ ಪುತ್ರ ಚಿತ್ರ ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಲಿದ್ದು, ಬಳಿಕ ಚಿತ್ರದ ಮುಂದಿನ ತಾಂತ್ರಿಕ ಕಾರ್ಯ ನಡೆಯಲಿದೆ.
ಅಂಜನೀ ಪುತ್ರ ಚಿತ್ರದ ಬಳಿಕ ರಶ್ಮಿಕಾ ಸಿಂಪಲ್ ಸುನಿ ನಿರ್ದೇಶನದ ಚಮಕ್ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಜೊತೆಯಾಗಲಿದ್ದಾರೆ. ಈ ಹಿಂದಿನ ಯೋಜನೆಯಂತೆ ರಶ್ನಿಕಾ ಚಿತ್ರತಂಡದೊಂದಿಗೆ ಇಟಲಿಗೆ ಹಾರಬೇಕಿತ್ತಾದರೂ ವಿಸಾ ಸಮಸ್ಯೆಯಿಂದಾಗಿ ಇದು ಸಾಧ್ಯವಾಗಿರಲಿಲ್ಲ. ಇನ್ನು ರಶ್ಮಿಕಾ ತೆಲುಗಿನಲ್ಲೂ ಪದಾರ್ಪಣೆ ಮಾಡುತ್ತಿದ್ದು, ನಾಗಶೌರ್ಯ ನಾಯಕನಟನಾಗಿ ಕಾಣಿಸಿಕೊಳ್ಳುತ್ತಿರುವ ತೆಲುಗು ಚಿತ್ರದಲ್ಲಿ ನಟಿ ರಶ್ಮಿಕಾ ನಾಯಕಿಯಾಗಿದ್ದಾರೆ. ಈ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ರಶ್ಮಿಕಾ ಅವರ ಕೆಲ ಸನ್ನಿವೇಶಗಳ ಚಿತ್ರೀಕರಣ ಬಾಕಿ ಇದೆ ಎಂದು ತಿಳಿದುಬಂದಿದೆ.
ಇನ್ನು ಚಿತ್ರರಂಗದಲ್ಲಿ ಕಿರಿಕ್ ಪಾರ್ಟಿ ಮೂಲಕ ಖ್ಯಾತಿ ಪಡೆದಿರುವ ರಶ್ಮಿಕಾಗೆ ತಮಗೆ ಇಷ್ಟವಾಗುವಂತಹ ಚಿತ್ರಕಥೆಗಳಿಗಾಗಿ ಕಾಯುತ್ತಿದ್ದಾರೆ. ರಶ್ಮಿಕಾಗೆ ಹೀರೋಯಿನ್ ಆಗುವ ಚಿತ್ರಕಥೆಗಳಿಗಿಂತ ಹೀರೋ ಆಗುವ ಚಿತ್ರಕಥೆಗಳೇ ಇಷ್ಟವಂತೆ. ನಾಯಕಿ ಪಾತ್ರವೇ ಪ್ರಧಾನವಾಗಿರುವ ಚಿತ್ರಕಥೆಗಾಗಿ ಕಾಯುತ್ತಿದ್ದೇನೆ ಎಂದು ರಶ್ಮಿಕಾ ಹೇಳಿದ್ದಾರೆ.