ಬೆಂಗಳೂರು: ಖ್ಯಾತ ನಟ ನಿರ್ಮಾಪಕ ಅರ್ಜುನ್ ಸರ್ಜಾ ನಿರ್ದೇಶನದ 'ಪ್ರೇಮ ಬರಹ' ಚಿತ್ರದ ಹಾಡುಗಳು ಯೂಟ್ಯೂಬ್ ನಲ್ಲಿ ಭಾರಿ ಯಶಸ್ಸು ಕಂಡಿದ್ದು, ಈಗಾಗಲೇ ಚಿತ್ರದ ಟೈಟಲ್ ಹಾಡು ಅತೀ ಹೆಚ್ಚು ಪ್ರಮಾಣದ ವೀಕ್ಷಕರನ್ನು ಕಂಡಿದೆ.
ಚಿತ್ರದ ಟೈಟಲ್ ಹಾಡು ಪ್ರೇಮ ಬರಹ ಇದೇ ಡಿಸೆಂಬರ್ 17ರಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಕೇವಲ 48 ಗಂಟೆಗಳ ಅವಧಿಯಲ್ಲಿ ಈ ಹಾಡನ್ನು ಬರೊಬ್ಬರಿ 28 ಸಾವಿರ ಮಂದಿ ವೀಕ್ಷಿಸಿದ್ದಾರೆ. ಇನ್ನು ಇದೇ ಖುಷಿಯಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯೊಂದಿಗೆ ಮಾತನಾಡಿರುವ ಚಿತ್ರದ ನಾಯಕ ಐಶ್ವರ್ಯ ಅರ್ಜುನ್ ಅವರು, ಪ್ರೇಮ ಬರಹ ಚಿತ್ರದ ಹಾಡುಗಳು ಸಮಧುರವಾಗಿದ್ದು, ಈ ಚಿತ್ರದ ಟೈಟಲ್ ಹಾಡು ನನ್ನ ಫೇವರಿಟ್ ಕೂಡ ಎಂದು ಹೇಳಿದ್ದಾರೆ.
"ನಾನು ಚಿಕ್ಕ ವಯಸ್ಸಿನಿಂದಲೂ ಅಪ್ಪನ ಹಾಡುಗಳನ್ನು ಕೇಳುತ್ತಾ ಬೆಳೆದ ಹುಡುಗಿ. ಅದರಲ್ಲೂ ಪ್ರತಾಪ್ ಚಿತ್ರ ಪ್ರೇಮ ಬರಹ ಹಾಡು ನನ್ನ ಫೇವರಿಟ್ ಹಾಡಾಗಿದೆ. ನಿಜ ಹೇಳಬೇಕು ಎಂದರೆ ಅಪ್ಪನಿಗೂ ಅದೇ ಹಾಡೇ ಫೇವರಿಟ್ ಇದೇ ಕಾರಣಕ್ಕೆ ಅವರು ಕಳೆದ ಆರು ವರ್ಷಗಳಿಂದ ತಮ್ಮ ಕಾಲರ್ ಟ್ಯೂನ್ ಆಗಿ ಅದೇ ಹಾಡನ್ನು ಉಳಿಸಿಕೊಂಡಿದ್ದಾರೆ. ಕೇವಲ ನಮಗೆ ಮಾತ್ರವಲ್ಲ ಅಪ್ಪನ ಸ್ನೇಹಿತರಿಗೂ ಪ್ರೇಮ ಬರಹ ಹಾಡುಗಳು ಅಚ್ಚುಮೆಚ್ಚು. ಇದೀಗ ಅಪ್ಪನ ಇದೇ ಹಾಡಿನ ಹೆಸರಿನಲ್ಲಿ ಚಿತ್ರ ಮಾಡುತ್ತಿರುವುದು ನನಗೆ ಹೆಮ್ಮೆಯ ಸಂಗತಿಯಾಗಿದೆ. ಅಪ್ಪನ ಚಿತ್ರದಲ್ಲಿ ನಾನೂ ಕೂಡ ಪ್ರಮುಖ ಪಾತ್ರಧಾರಿಯಾಗಿರುವು ಖುಷಿತಂದಿದೆ ಎಂದು ಹೇಳಿದ್ದಾರೆ.
ಇನ್ನು ಪ್ರೇಮಬರಹ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜನೆ ಮಾಡಿದ್ದು, ಹಳೆಯ ಪ್ರೇಮ ಬರಹ ಹಾಡಿನ ಮೂಲ ಅವತರಣಿಕೆಯ ಸಂಗೀತವನ್ನು ಹಾಗೆಯೇ ಉಳಿಸಿಕೊಂಡು ಹಾಡಿಗೆ ಆಧುನಿಕ ಟಚ್ ನೀಡಲಾಗಿದೆ. ಇನ್ನು ಈ ಹೊಸ ಅವತರಣಿಕೆಯ ಹಾಡಿಗೆ ಅರ್ಮಾನ್ ಮಲ್ಲಿಕ್ ಮತ್ತು ಪಾಲಕ್ ಮುಚ್ಚಲ್ ಎಂಬ ಗಾಯಕರು ಧ್ವನಿ ನೀಡಿದ್ದಾರೆ. ಇನ್ನು ಈ ಹಾಡಿನ ಚಿತ್ರೀಕರಣವನ್ನು ಸ್ವಿಟ್ಜರ್ಲೆಂಡ್ ನಲ್ಲಿ ಚಿತ್ರೀಕರಿಸಲಾಗಿದ್ದು, ಈಗಾಗಲೇ ಚಿತ್ರದ ಚಿತ್ರೀಕರಣದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿವೆ.
ಇನ್ನು ಅರ್ಜುನ್ ಸರ್ಜಾ ನಿರ್ದೇಶನದ ಪ್ರೇಮ ಬರಹ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಸೆನ್ಸಾರ್ ಮಂಡಳಿಯಿಂದ ಪ್ರಮಾಣ ಪತ್ರಕ್ಕಾಗಿ ಕಾಯುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜನವರಿಯಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.