ಬೆಂಗಳೂರು: ಕನ್ನಡದ ಖ್ಯಾತ ಹಿರಿಯ ನಟ ದಿವಂಗತ ಕೆಎಸ್ ಅಶ್ವಥ್ ಅವರ ಪುತ್ರ ನಟ ಶಂಕರ್ ಅಶ್ವಥ್ ಅವರು ಜೀವನ ನಿರ್ವಹಣೆಗೆ ಉಬರ್ ಟ್ಯಾಕ್ಸಿ ಚಲಾಯಿಸುತ್ತಿರುವುದಾಗಿ ಹೇಳಿದ್ದಾರೆ.
ಇತ್ತೀಚೆಗಷ್ಚೇ ನಟ ಶಂಕರ್ ಅಶ್ವಥ್ ಅವರು ಟ್ಯಾಕ್ಸಿ ಚಲಾಯಿಸುತ್ತಿರುವ ಸುದ್ದಿಯನ್ನು ಖಾಸಗಿ ಮಾಧ್ಯಮವೊಂದು ಪ್ರಸಾರ ಮಾಡಿತ್ತು. ಅಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲೂ ಈ ಸುದ್ದಿ ವ್ಯಾಪಕ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ತಮ್ಮ ನಿರ್ಧಾರದ ಕುರಿತು ಸ್ಪಷ್ಟನೆ ನೀಡಿರುವ ನಟ ಶಂಕರ್ ಅಶ್ವಥ್ ಅವರು, ನಿಷ್ಠೆ ಪ್ರಮಾಣಿಕವಾಗಿ ಮಾಡುವ ಯಾವುದೇ ಕೆಲಸವನ್ನೂ ಕೀಳಾಗಿ ಕಾಣಬಾರದು ಎಂದು ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ನಮ್ಮ ತಂದೆಯ ಕಾರ್ಯಕ್ಕಾಗಿ ಹಣ ಹೊಂಚುವ ಸಲುವಾಗಿ ಸಾಕಷ್ಟು ಪ್ರಯತ್ನ ಪಟ್ಟೆ. ಅಂತಿಮವಾಗಿ ನನ್ನ ಕಾರನ್ನು ಉಬರ್ ಗೆ ಅಟ್ಯಾಚ್ ಮಾಡಿಸಿ ಇದೀಗ ಅದರಿಂದಲೇ ಹಣ ಕೂಡಿಡುತ್ತಿದ್ದೇನೆ. ನಿಷ್ಠೆ ಮತ್ತು ಪ್ರಾಮಾಣಿಕವಾಗಿ ದುಡಿಯುವ ಯಾವುದೇ ಕೆಲಸವೂ ಕೀಳಲ್ಲ. ಹೀಗಾಗಿ ನಾನು ಈ ಕೆಲಸವನ್ನು ದೇವರ ಸಮಾನ ಎಂದು ಪ್ರೀತಿಸುತ್ತೇನೆ. ನಿಜ ಹೇಳುಬೇಕು ಎಂದರೆ ಟ್ಯಾಕ್ಸಿ ಚಾಲನೆಯಿಂದ 020ನನ್ನ ಒಂದಷ್ಟು ಆರ್ಥಿಕ ಸಮಸ್ಯೆಗಳು ನೀಗಿವೆ ಎಂದು ಹೇಳಿದ್ದಾರೆ.
ಇನ್ನು ಚಿತ್ರರಂಗದ ಕುರಿತು ಮಾತನಾಡಿದ ಶಂಕರ್ ಅಶ್ವಥ್ ಅವರು, ಅವಕಾಶಗಳೇ ಇಲ್ಲ ಅಂತೇನೂ ಇಲ್ಲ. ಆದರೆ ಸಿಗುವ 2ಅವಕಾಶಗಳಿಂದ ಬದುಕು ಸಾಗಿಸುವುದು ಕಷ್ಟ. ಚಿತ್ರೀಕರಣದಲ್ಲಿರುವ ದಿನಗಳಿಗಿಂತ ಕೆಲಸವಿಲ್ಲದೆ ಇರುವ ದಿನಗಳೇ ಹೆಚ್ಚು. ಸಿನಿಮಾ ಮಾಧ್ಯಮ ವಿಸ್ತಾರವಾಗಿದ್ದರೂ ಅದು ಜನರೇಷನ್ ಗ್ಯಾಪ್‌ನಿಂದಲೋ ಏನೋ ನನ್ನಂತಹವರಿಗೆ ಅವಕಾಶಗಳು ಸಿಗುತ್ತಿಲ್ಲ. ಹಾಗೆಂದು ಸಿನಿಮಾ ರಂಗವನ್ನು ದೂಷಿಸಲು ನಾನು ಸಿದ್ಧವಿಲ್ಲ. ನಮ್ಮ ತಂದೆ ನನಗೆ ಸ್ವಾಭಿಮಾನದಿಂದ ಬದುಕುವುದನ್ನು ಕಲಿಸಿಕೊಟ್ಟಿದ್ದಾರೆ. ಯಾವತ್ತೂ ಯಾರ ಮುಂದೆಯೂ ಅವಕಾಶಕ್ಕಾಗಿಯಾಗಲೀ ಹಣಕ್ಕಾಗಲೀ ಕೈಚಾಚಿ ನಿಲ್ಲುವ ಸ್ವಭಾವ ನಮ್ಮ ಕುಟುಂಬದ್ದಲ್ಲ ಎನ್ನುತ್ತಾರೆ ಶಂಕರ್ ಅಶ್ವಥ್. ಕಾಲಾವಕಾಶವಿದ್ದಾಗ ದುಡಿಯಬೇಕು. ವಯಸ್ಸಾಗುವಾಗ ಆರೋಗ್ಯ ಕೆಟ್ಟು ಹೋಗುವ ಸಂದರ್ಭ ಬರುತ್ತದೆ. ಅದಕ್ಕೆ ವೆಚ್ಚಗಳನ್ನು ಮಾಡಬೇಕಾಗುತ್ತದೆ. ಅದಕ್ಕಾಗಿ ಸಾಕಷ್ಟು ದುಡಿದು ಇಟ್ಟುಕೊಳ್ಳಬೇಕು. ನಾವು ಮಧ್ಯಮ ವರ್ಗದವರು. ಹೀಗಾಗಿ ನನಗೆ ಹೆಚ್ಚು ಬೇಡಿಕೆ ಇಲ್ಲದಿದ್ದಾಗ ಅಥವಾ ನನಗೆ ಕಾಲಾವಕಾಶ ಇದ್ದಾಗ ಸುಮ್ಮನೆ ಮನೆಯಲ್ಲಿ ಕುಳಿತುಕೊಂಡು ಏನು ಮಾಡಲಿ? ಈ ವೇಳೆ ಉಬರ್ ಕ್ಯಾಬ್ ಓಡಿಸಿಕೊಂಡು ಒಂದಷ್ಟು ದುಡಿಯಬಹುದು ಅನ್ನಿಸಿದ್ದರಿಂದ ಕ್ಯಾಬ್ ಚಾಲಕನಾಗಿದ್ದೇನೆ ಎನ್ನುವ ಶಂಕರ್ ಅವರಿಗೆ ನಾನೊಬ್ಬ ಕನ್ನಡ ಚಿತ್ರರಂಗದ ದೊಡ್ಡ ಕಲಾವಿದನ ಮಗನೆನ್ನುವ ಅಹಂಕಾರ ಎಳ್ಳಷ್ಟೂ ಇಲ್ಲ ಎಂದು ಹೇಳಿದರು.