ದಂಡುಪಾಳ್ಯ ಸಿನೆಮಾದ ಪೋಸ್ಟರ್
ಬೆಂಗಳೂರು: ನಟಿ ಪೂಜಾ ಗಾಂಧಿ, ಮಾರ್ಕಂಡ್ ದೇಶಪಾಂಡೆ ಮತ್ತು ರವಿಶಂಕರ್ ನಟನೆಯ ದಂಡುಪಾಳ್ಯ ಸಿನೆಮಾ ಸರಣಿಯ ಎರಡನೇ ಭಾಗದ ಚಿತ್ರೀಕರಣ ಕಾರಣಾಂತರಗಳಿಂದ ನಿಂತುಹೋಗಿತ್ತು. ಈಗ ನಿರ್ಮಾಪಕ ವೆಂಕಟ್ ಸಮಸ್ಯೆಗಳನ್ನು ಬಗೆಹರಿಸಿಕೊಂಡಿರುವುದರಿಂದ ಈ ಚಿತ್ರದ ನಿರ್ದೇಶಕ ಶ್ರೀನಿವಾಸ ರಾಜು ಸಿಹಿಸುದ್ದಿ ಹೊತ್ತು ಹಿಂದಿರುಗಿದ್ದಾರೆ.
ಮಾರ್ಚ್ ೨೦೧೬ ರಲ್ಲಿ ಪ್ರಾರಂಭವಾದ ಈ ಸಿನೆಮಾದ ಚಿತ್ರೀಕರಣಕ್ಕೆ ಇನ್ನು ೨೦ ದಿನಗಳ ಕೆಲಸವಷ್ಟೇ ಉಳಿದಿದೆ. ಕಳೆದ ೯ ತಿಂಗಳುಗಳಿಂದ ಇದು ಮುಂದೂಡುತ್ತಾ ಬಂದಿದ್ದರಿಂದ ಕಲಾವಿದರಿಂಗೆ ಮತ್ತು ತಂತ್ರಜ್ಞರಿಗೆ ಈ ಯೋಜನೆಯ ಬಗ್ಗೆ ಆಸಕ್ತಿಯೇ ಕುಂದಿತ್ತು.
ಈಗ ಮರುಯೋಜನೆ ರೂಪಿಸಿಕೊಂಡಿರುವ ಶ್ರೀನಿವಾಸರಾಜು ಮತ್ತೆ ಒಂದು ಅಥವಾ ಎರಡು ವಾರದಲ್ಲಿ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ. "ನೋಟು ಹಿಂಪಡೆತ ನಿರ್ಧಾರ ನಮ್ಮ ಯೋಜನೆಗೆ ಭಾರಿ ಪೆಟ್ಟು ನೀಡಿತ್ತು. ಈಗ ಸಮಸ್ಯೆಗಳು ಬಗೆಹರಿದಿವೆ" ಎನ್ನುತ್ತಾರೆ ನಿರ್ದೇಶಕ.
ಈಮಧ್ಯೆ ಸದರಿ ಸಿನೆಮಾದ ಜೊತೆಜೊತೆಗೆ ದಂಡುಪಾಳ್ಯ ೩ ನೇ ಭಾಗವನ್ನು ಕೂಡ ನಿರ್ದೇಶಿಸಲು ಶ್ರೀನಿವಾಸರಾಜು ಮುಂದಾಗಿದ್ದಾರೆ. ಈ ಭಾಗವನ್ನು ಅವರೇ ನಿರ್ಮಿಸಲಿದ್ದಾರಂತೆ. "ಈಗ ೨ನೆ ಮತ್ತು ೩ ನೇ ಭಾಗವನ್ನು ಒಂದೇ ಹಂತದಲ್ಲಿ ಮುಗಿಸಿ ೧೫-೨೦ ದಿನಗಳ ಅಂತರದಲ್ಲಿ ಬಿಡುಗಡೆ ಮಾಡುವ ಯೋಜನೆ ಹೊಂದಿದ್ದೇನೆ" ಎನ್ನುತ್ತಾರೆ.
ಚಿತ್ರೀಕರಣ ಉಳಿದ ಭಾಗವನ್ನು ಮುಗಿಸಲು ಉತ್ಸುಕರಾಗಿರುವ ಪೂಜಾ ಗಾಂಧಿ "ನನ್ನ ಪ್ರತಿಭೆಯನ್ನು ಹೊರಹಾಕಲು ಸಹಕರಿಸಿದ ಸಿನೆಮಾ ಇದು. ನಿರ್ಮಾಪಕರು ಮತ್ತೆ ಸಿನೆಮಾ ಪ್ರಾರಂಭಿಸಲಿದ್ದಾರೆ ಎಂದು ತಿಳಿದು ಥ್ರಿಲ್ ಆದೆ. ಶ್ರೀನಿವಾಸ್ ೩ ನೇ ಭಾಗಕ್ಕೆ ಕೂಡ ಅಣಿಯಾಗಿದ್ದಾರೆ ಎಂದು ತಿಳಿದು ಇನ್ನು ಹೆಚ್ಚು ಸಂತಸವಾಯಿತು. ದಂಡುಪಾಳ್ಯ ನನ್ನನ್ನು ಇನ್ನಷ್ಟು ದಿನ ಬ್ಯುಸಿಯಾಗಿ ಇಟ್ಟಿರುತ್ತದೆ" ಎನ್ನುತ್ತಾರೆ ನಟಿ. ಈಮಧ್ಯೆ ನಟಿ ಮತ್ತೊಂದು ಸಿನೆಮಾ 'ಭಾನುಮತಿ'ಯಲ್ಲಿ ನಟಿಸಲು ಸಹಿ ಹಾಕಿದ್ದು, ಅಧಿಕೃತ ಘೋಷಣೆಯಾಗಬೇಕಿದೆ.