ಅಕಿರ ಖ್ಯಾತಿಯ ನಿರ್ದೇಶಕ ನವೀನ್ ರೆಡ್ಡಿ ನಿರ್ದೇಶನದ ಮುಂದಿನ ಚಿತ್ರದಲ್ಲಿ ಕೆಂಡಸಂಪಿಗೆ ಖ್ಯಾತಿ ಮಾನ್ವಿತಾ ಹರೀಶ್ ನಟಿಸುತ್ತಿದ್ದಾರೆ.
ಮಾನ್ವಿತಾಗೆ ಜೋಡಿಯಾಗಿ ನವನಟ ಪ್ರಭು ಅಭಿನಯಿಸುತ್ತಿದ್ದಾರೆ. ಇನ್ನು ಪ್ರಭು ಊರ್ವಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಇದು ಅವರಿಗೆ ಎರಡನೇ ಚಿತ್ರವಾಗಲಿದೆ.
ಸ್ಯಾಂಡಲ್ವುಡ್ ಗೆ ಕಾಲಿಡುತ್ತಲೇ ಸ್ಟಾರ್ ನಿರ್ದೇಶಕ ಸೂರಿ ಗರಡಿಯಲ್ಲಿ ಕೆಂಡಸಂಪಿಗೆ ಚಿತ್ರದಲ್ಲಿ ನಟಿಸಿದ್ದ ಮಾನ್ವಿತಾ ನಂತರ ಶಿವರಾಜ್ ಕುಮಾರ್ ಜತೆ ಟಗರು ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಚಿತ್ರರಂಗ ಒಂದು ರೇಸ್ ಇದ್ದಂತೆ. ಇಲ್ಲಿ ಆಮೆಯಂತೆ ನಿಧಾನಗತಿಯಲ್ಲಿ ಯೋಚಿಸಿ ಮುಂದಡಿ ಇಡಬೇಕು. ಗಾಂಧಿನಗರಕ್ಕೆ ಕಾಲಿಡುತ್ತಿರುವ ಹೊಸ ತಂತ್ರಜ್ಞರು ಒಳ್ಳೆಯ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಈ ಹಿಂದೆ ನವೀನ್ ರೆಡ್ಡಿ ಅಕಿರ ಚಿತ್ರ ನಿರ್ದೇಶಿಸಿದ್ದರು. ಈ ಚಿತ್ರ ತಾಂತ್ರಿಕತೆಯ ದೃಷ್ಟಿಯಿಂದ ಪ್ರಶಂಸೆ ಗಳಿಸಿತ್ತು. ಹೀಗಾಗಿ ಹೊಸಬರ ತಂಡವನ್ನು ಸೇರಿಕೊಂಡಿರುವುದಾಗಿ ಮಾನ್ವಿತಾ ಹೇಳಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆದರೆ ಮಾರ್ಚ್ ಕೊನೇ ವಾರದಲ್ಲಿ ಈ ಚಿತ್ರಕ್ಕೆ ಶೂಟಿಂಗ್ ಶುರುವಾಗಲಿದೆ. ಅಕಿರ ಚಿತ್ರಕ್ಕೆ ಕೆಲಸ ಮಾಡಿದ್ದ ತಂತ್ರಜ್ಞರೇ ಈ ಚಿತ್ರಕ್ಕೂ ಕೆಲಸ ಮಾಡಲಿದ್ದಾರೆ.