ಮನಸು ಮಲ್ಲಿಗೆ ಚಿತ್ರದ ದೃಶ್ಯ
ಸಂಗೀತ ನಿರ್ದೇಶಕರಾದ ಅಜಯ್ -ಅತುಲ್ ಮರಾಠಿ ಸಿನಿಮಾ ಉದ್ಯಮದಲ್ಲಿ ಸೈರಾಟ್ ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡಿ ಇತಿಹಾಸ ನಿರ್ಮಿಸಿದ್ದು ಹಳೆಯ ಸಂಗತಿ. ಇದೀಗ ಸೈರಾಟ್ ಚಿತ್ರದ ಕನ್ನಡ ರಿಮೇಕ್ ಮನಸು ಮಲ್ಲಿಗೆ ಚಿತ್ರಕ್ಕೆ ಕೂಡ ಸಂಗೀತ ಮತ್ತು ಹಿನ್ನೆಲೆ ಗೀತೆ ರಚಿಸುವ ಮೂಲಕ ಪರೀಕ್ಷೆ ಎದುರಿಸಲು ಸಜ್ಜಾಗಿದ್ದಾರೆ.
ಮನಸು ಮಲ್ಲಿಗೆ ಚಿತ್ರದ ಆಡಿಯೊ ಇಂದು ಪ್ರೇಮಿಗಳ ದಿನದಂದು ಬಿಡುಗಡೆಯಾಗುತ್ತಿದೆ. ಮರಾಠಿ ಭಾಷೆಯಲ್ಲಿ ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಸಂಗೀತಕ್ಕೆ ಆಡಿಯೊವೊಂದರಿಂದಲೇ 12 ಕೋಟಿ ರೂಪಾಯಿ ಆದಾಯ ಬಂದಿತ್ತು.
ಮರಾಠಿಯಲ್ಲಿ ಎಲ್ಲಾ ದಾಖಲೆಗಳನ್ನು ಮುರಿದ ಸೈರಾಟ್ ಚಿತ್ರದ ಸಂಗೀತವನ್ನು ಕೇಳಿದ ಎಲ್ಲರೂ ಅದಕ್ಕೆ ಮಾರು ಹೋಗಿದ್ದರು. ಸೈರಾಟ್ ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡಿದ ಅಜಯ್-ಅತುಲ್ ಅವರೇ ಕನ್ನಡದ ರಿಮೇಕ್ ಗೂ ಸಂಗೀತ ನಿರ್ದೇಶನ ನೀಡಿದ್ದಾರೆ.
ಕನ್ನಡದ ಸೊಗಡಿಗೆ ತಕ್ಕಂತೆ ಇಲ್ಲಿ ಕೂಡ ಅಜಯ್-ಅತುಲ್ ತಮ್ಮ ಕಾರ್ಯಕ್ಕೆ ನ್ಯಾಯ ಒದಗಿಸಿದ್ದಾರೆ. ರಿಮೇಕ್ ಚಿತ್ರವಾದ ಕಾರಣ ಇಲ್ಲಿ ಹೋಲಿಕೆ ಖಂಡಿತಾ ನಡೆಯುತ್ತದೆ. ಅದೃಷ್ಟವೋ, ದುರಾದೃಷ್ಟವೋ ಬೆಂಗಳೂರಿಗರು ಅನೇಕ ಭಾಷೆಗಳ ಅನೇಕ ಚಿತ್ರಗಳನ್ನು ನೋಡಿರಬಹುದು. ಹಾಗಾಗಿ ಸೈರಾಟ್ ನ ರಿಮೇಕ್ ಮಾಡುವಾಗ ನಮಗೆ ಸವಾಲು ಮತ್ತು ಜವಾಬ್ದಾರಿ ಹೆಚ್ಚಿತ್ತು. ಮನಸು ಮಲ್ಲಿಗೆ ಚಿತ್ರದ ಸಂಗೀತ ಕೂಡ ಅದ್ಭುತವಾಗಿದ್ದು ಸೈರಾಟ್ ಗೆ ಸಮನಾಗಿ ಬಂದಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಎಸ್.ನಾರಾಯಣ್.
ಚಿತ್ರದಲ್ಲಿ 5 ಹಾಡುಗಳಿವೆ. ಪ್ರೇಮಿಗಳ ದಿನದಂದು ಚಿತ್ರವನ್ನು ಬಿಡುಗಡೆ ಮಾಡುವ ಯೋಚನೆಯಲ್ಲಿದ್ದರು ನಾರಾಯಣ್. ಚೆಲುವಿನ ಚಿತ್ತಾರದ ನಂತರ ಒಂದು ಸುಂದರ ಪ್ರೇಮ ಕಥೆಯನ್ನು ತೆರೆಯ ಮೇಲೆ ಪ್ರೇಕ್ಷಕರು ಕಾಣಬಹುದು.
ಚಿತ್ರದಲ್ಲಿನ ಎರಡು ಹಾಡುಗಳನ್ನು ಅಜಯ್-ಅತುಲ್ ಅವರೇ ಹಾಡಿದ್ದು, ಇನ್ನು ಉಳಿದು ಮೂರು ಹಾಡುಗಳನ್ನು ಸೋನು ನಿಗಮ್, ಶ್ರೇಯಾ ಘೋಷಾಲ್ ಮತ್ತು ಚಿನ್ಮಯ್ ಶ್ರೀಪಾದ್ ಧ್ವನಿ ನೀಡಿದ್ದಾರೆ.
ರಾಕ್ ಲೈನ್ ನಿರ್ಮಾಣದಡಿಯಲ್ಲಿ ಚಿತ್ರ ತಯಾರಾಗಿದ್ದು ರಿಂಕು ರಾಜ್ಗುರು ಮತ್ತು ನಿಶಾಂತ್ ನಾಯಕ-ನಾಯಕಿಯರಾಗಿದ್ದಾರೆ. ಈ ವರ್ಷ ಬೇಸಿಗೆಯಲ್ಲಿ ಚಿತ್ರ ತೆರೆಗೆ ಬರುವ ನಿರೀಕ್ಷೆಯಿದೆ.