ಬೆಂಗಳೂರು: ಕನ್ನಡದ ಖ್ಯಾತ ನಟ-ನಿರ್ದೇಶಕ ರವಿಚಂದ್ರನ್ ನಾಯಕನಟನ ಪಾತ್ರಗಳಿಂದ ಇತರ ಪಾತ್ರಗಳತ್ತ ಹೊರಳಿರುವುದು ಅವರನ್ನು ಸದಾ ಕಾರ್ಯನಿರತವಾಗಿಟ್ಟಿದೆ. ಅವರು 'ಹೆಬ್ಬುಲಿ' ಸಿನೆಮಾ ಮೂಲಕ ಮತ್ತೆ ಹಿಂದಿರುಗಿದ್ದಾರೆ. ಐಎಎಸ್ ಅಧಿಕಾರಿ ಮತ್ತು ಸುದೀಪ್ ಅವರ ಸಹೋದರನ ಪಾತ್ರವನ್ನು ನಿರ್ವಹಿಸಿರುವ ರವಿಚಂದ್ರನ್, ಸುದೀಪ್ ಜೊತೆಗಿನ ಒಡನಾಟವನ್ನು ಬಿಚ್ಚಿಡುತ್ತಾರೆ.
"ನಮ್ಮಿಬ್ಬರ ನಡುವೆ ಪರಸ್ಪರ ಮೆಚ್ಚುಗೆಯಿದೆ. ಅವರು ನನ್ನ ಯಾವುದೇ ಯೋಜನೆಗಳಿಗೆ ಇಲ್ಲ ಎಂದಿಲ್ಲ ಮತ್ತು ನಾನು ಕೂಡ ಅವರ ಎಲ್ಲ ಯೋಜನೆಗಳಿಗೆ ಓಗೊಟ್ಟಿದ್ದೇನೆ" ಎನ್ನುವ ಕ್ರೇಜಿ ಸ್ಟಾರ್ "ಪ್ರತಿ ಸಂದರ್ಶನದಲ್ಲಿಯೂ ಸುದೀಪ್ ನನ್ನ ಬಗ್ಗೆ ಮಾತನಾಡುತ್ತಾರೆ. ಅದು ನನ್ನ ಬಗ್ಗೆ ಇರುವ ಪ್ರೀತಿಯೋ ಏನೋ ಆದರೆ ನಮ್ಮಿಬರ ನಡುವೆ ಅತಿ ಗಟ್ಟಿ ಬಾಂಧವ್ಯ ಇದೆ. ಅವರು ಮಾಡುವ ಪ್ರತಿ ಕೆಲಸದಲ್ಲಿ ನಾನಿರಲು ಬಯಸುತ್ತಾರೆ. ಯಾರಾದರೂ ನಿಮ್ಮನ್ನು ಪ್ರೀತಿಸಿದರೆ ಅಷ್ಟೇ ತೀವ್ರವಾಗಿ ಅವರನ್ನು ಪ್ರೀತಿಸಬೇಕು ಎಂದು ನಾನು ನಂಬಿದ್ದೇನೆ. ನಾನು ಮಾಡುವ ಪಾತ್ರ ಅಪ್ಪನದ್ದೋ ಅಥವಾ ಅಣ್ಣನದ್ದೋ ನಾನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಸುದೀಪ್ ಅವರಿಗೆ ಸಹಜ ಪ್ರವೃತ್ತಿ ಇದೆ ಮತ್ತು ಇದು ನಮ್ಮಿಬ್ಬರಿಗೂ ಸಹಕರಿಸುತ್ತದೆ" ಎನ್ನುತ್ತಾರೆ.
ನಾಯಕನಟನಲ್ಲದೆ ಇತರೆ ಪಾತ್ರಗಳನ್ನೂ ಮಾಡುತ್ತಿರುವುದರ ಬಗ್ಗೆ: ಪಾತ್ರ ಪ್ರಮುಖವಾಗಿದ್ದಲ್ಲಿ, ಸಿನೆಮಾದಲ್ಲಿ ಕೇವಲ ಎರಡೇ ದೃಶ್ಯಗಳಿದ್ದರು ಅದರಲ್ಲಿ ನಟಿಸಲು ನಟ ಹಿಂಜರಿಯಬಾರದು. "ಜನರು ಕಲಾವಿದನಿಗೆ ನೀಡುವ ಗೌರವನ್ನು ನಿರ್ದೇಶಕ ಅರಿತು ಪಾತ್ರವನ್ನು ಅಷ್ಟೇ ಪರಿಣಾಮಕಾರಿಯಾಗಿ ಚಿತ್ರಿಸಬೇಕು. ಕೇವಲ ತೆರೆಯ ಮೇಲೆ ಕಾಣಿಸಿಕೊಳ್ಳಲೆಂದು ನನ್ನನ್ನು ಬಳಸಬಾರದು. ಅದು ಅವರಿಗೂ ಸಹಕರಿಸುವುದಿಲ್ಲ. ನಾನು ಸಿನೆಮಾಗೆ ಮೌಲ್ಯವನ್ನು ತುಂಬಲು ಇಷ್ಟಪಡುತ್ತೇನೆ ಎಂದು ನಿರ್ದೇಶಕರಿಗೆ ಹೇಳುತ್ತೇನೆ" ಎನ್ನುತ್ತಾರೆ ರವಿಚಂದ್ರನ್.
ಪ್ರಮುಖ ಪಾತ್ರಗಳಲ್ಲಿ ಸ್ಟಾರ್ ನಟರು ನಟಿಸುವುದರಿಂದ ಮೌಲ್ಯ ಹೆಚ್ಚುವುದರ ಬಗ್ಗೆ: ಪ್ರೇಮಲೋಕ ಇಂದಿಗೂ ಅತಿ ಮಹತ್ವದ ಸಿನೆಮಾ, ಆದರೆ ಅದು ಸಾಧ್ಯವಾದದ್ದು ಕೇವಲ ನಾಯಕನಟನಿಂದಲ್ಲ ಎನ್ನುವ ರವಿಚಂದ್ರನ್ "ಜೂಹಿ ಚಾವ್ಲಾ ಅವರ ತಂದೆಯ ಪಾತ್ರದಲ್ಲಿ ಶ್ರೀನಾಥ್ ನಟಿಸಿದ್ದರು, ನನ್ನ ತಂದೆಯ ಪಾತ್ರದಲ್ಲಿ ಲೋಕೇಶ್, ಪ್ರಾಂಶುಪಾಲರ ಪಾತರದಲ್ಲಿ ಪ್ರಭಾಕರ್ ಮತ್ತು ವಿಷ್ಣುವರ್ಧನ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು.. ಈ ಎಲ್ಲ ಪಾತ್ರಗಳನ್ನೂ ಸ್ಟಾರ್ ನಟರು ನಟಿಸಿದ್ದರಿಂದ ಸಿನೆಮಾ ದೊಡ್ಡದಾಯಿತು. 'ಪುಟ್ನಂಜ' ಸಿನೆಮಾದಲ್ಲಿ ಉಮಾಶ್ರೀ, 'ಸಿಪಾಯಿ' ಸಿನೆಮಾದಲ್ಲಿ ಚಿರಂಜೀವಿಯಯವರ ಅತಿಥಿ ಪಾತ್ರ ಕೂಡ ಅಷ್ಟೇ ದೊಡ್ಡದು" ಎನ್ನುತ್ತಾರೆ ರವಿಚಂದ್ರನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics