ಬೆಂಗಳೂರು: ಈ ಫೆಬ್ರವರಿ ೨೩ಕ್ಕೆ ಸೂರಿ ನಿರ್ದೇಶನದ 'ದುನಿಯಾ' ಬಿಡುಗಡೆಯಾಗಿ ೧೦ ವರ್ಷ! ನಿರ್ದೇಶಕ ಸೂರಿ ಮತ್ತು ನಟ ವಿಜಯ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಭದ್ರ ನೆಲೆ ಕೊಟ್ಟ ಸಿನೆಮಾ ಇದು. ಇಂದಿಗೂ ಅವರ ಹೆಸರುಗಳ ಹಿಂದೆ ಈ ಸಿನೆಮಾ ಸೇರ್ಪಡೆಯಾಗುವುದು ವಿಶೇಷ.
ಈ ಸಂದರ್ಭದಲ್ಲಿ ಸಿಟಿ ಎಕ್ಸ್ಪ್ರೆಸ್ ಜೊತೆಗೆ ಮಾತನಾಡಿದ ಸೂರಿ ದುನಿಯಾ ದಿನಗಳ ಗತ ವೈಭವವವನ್ನು ನೆನಪಿಸಿಕೊಳ್ಳುತ್ತಾರೆ. "ವರ್ಷಗಳ ನಂತರ, ಸಿನೆಮಾದ ಆರ್ಥಿಕ ವಿಷಯಗಳನ್ನು ಕಲಿತುಕೊಂಡು, ಎಲ್ಲೋ ನಾನು ಆ ಮುಗ್ಧತೆಯನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ. ಮತ್ತೊಮ್ಮೆ ದುನಿಯಾದಂತಹ ಸಿನೆಮಾ ಮಾಡಲು ಆ ಮುಗ್ಧತೆಯನ್ನು ಮರುಕಳಿಸುವಂತೆ ನಾನು ಈ ದಿನಗಳಲ್ಲಿ ದೇವರಿಗೆ ಪ್ರಾರ್ಥನೆ ಮಾಡುತ್ತಿರುತ್ತೇನೆ" ಎನ್ನುತ್ತಾರೆ ನಿರ್ದೇಶಕ.
ಪ್ರೇಕ್ಷಕರ ಪ್ರಶಂಸೆಯೇ ತಮ್ಮನ್ನು ಮುಂದಕ್ಕೆ ಕೊಂಡೊಯ್ಯುತ್ತಿರುವುದು ಎನ್ನುವ ಸೂರಿ "ಜನ ನಾನು ಒಳ್ಳೆಯ ಸಿನೆಮಾಗಳನ್ನು ಮಾಡುತ್ತೇನೆ ಎಂದಾಗ, ಅದು ಇನ್ನಷ್ಟು ಉತ್ತಮ ಸಿನೆಮಾಗಳನ್ನು ಮಾಡಲು ಪ್ರರೇಪಿಸುತ್ತದೆ. ಸಾರ್ವಜನಿಕರ ವಿಮರ್ಶೆ ನನ್ನನ್ನು ಪ್ರೇರೇಪಿಸುತ್ತದೆ" ಎನ್ನುತ್ತಾರೆ.
ಮತ್ತೊಂದು 'ದುನಿಯಾ'ವನ್ನು ಸೃಷ್ಟಿಸುವ ಬಗ್ಗೆ ಭರವಸೆ ಹೊಂದಿರುವ ನಿರ್ದೇಶಕ "ನಾನು ಅದನ್ನು ಖಂಡಿತವಾಗಿಯೂ ಮಾಡುತ್ತೇನೆ" ಎನ್ನುತ್ತಾರೆ. ಆದರೆ ಇದು ಮುಂದುವರೆದ ಬಾಗವಾಗಿರುವುದಿಲ್ಲ ಎಂದು ಸ್ಪಷ್ಟಪಡಿಸುವ ಅವರು "ನಾವು ಸಿನೆಮಾಗಳನ್ನು ಮಾಡುವುದಿಲ್ಲ. ಸಿನಿಮಾಗಳೇ ನಮ್ಮನ್ನು ಎಲ್ಲವನ್ನು ಮಾಡುವಂತೆ ಮಾಡುತ್ತವೆ. ನಾವು ಜನರನ್ನು ಆಯ್ಕೆ ಮಾಡಿ ಅದನ್ನು ಸಿಂಗರಿಸುತ್ತೇವೆ. ಪ್ರದರ್ಶನ ನಿರಂತರವಾಗಿರುತ್ತದೆ ಮತ್ತು ಅದಕ್ಕೆ ಪಾತ್ರರಾಗಿರಬೇಕಾದವರು ಅದರ ಭಾಗವಾಗುತ್ತಾರೆ" ಎನ್ನುತ್ತಾರೆ ಸೂರಿ.