ಮುಂಬೈ: ಅಭಿಮಾನಿಯೊಬ್ಬ ತನ್ನ ನೆಚ್ಚಿನ ನಟಿಯ ಮೊಬೈಲ್ ನಂಬರ್ ಪಡೆಯಲು ಆಕೆಯ ಆದಾಯ ತೆರಿಗೆ ಖಾತೆಯನ್ನೇ ಹ್ಯಾಕ್ ಮಾಡಿರುವ ಘಟನೆ ನಡೆದಿದೆ.
ಖ್ಯಾತ ಬಾಲಿವುಡ್ ನಟಿ ಕರೀನಾ ಕಪೂರ್ ಅವರ ಕಟ್ಟಾ ಅಭಿಮಾನಿಯೊಬ್ಬ ಆಕೆಯ ಫೋನ್ ನಂಬರ್ ಪಡೆದು ಮಾತನಾಡುವ ಹಂಬಲದಿಂದ ನಟಿಯ ಆದಾಯ ತೆರಿಗೆ ಖಾತೆಯನ್ನೇ ಹ್ಯಾಕ್ ಮಾಡಿ ಜೈಲು ಅತಿಥಿಯಾಗಿರುವ ಘಟನೆ ನಡೆದಿದೆ. ಬಂಧಿತನನ್ನು 26 ವರ್ಷದ ಮನೀಷ್ ತಿವಾರಿ ಎಂದು ಗುರುತಿಸಲಾಗಿದ್ದು, ಆನ್ ಲೈನ್ ನಲ್ಲಿ ಕರೀನಾ ಕಪೂರ್ ಅವರ ಪ್ಯಾನ್ ನಂಬರ್ ಪಡೆದು, ಅದರ ಮೂಲಕ ವಿವಿಧ ಐಪಿ ಅಡ್ರೆಸ್ ಗಳ ಮೂಲಕ ಕರೀನಾ ಕಪೂರ್ ಅವರ 2016 ಮತ್ತು 2017ನೇ ಸಾಲಿನ ಆದಾಯ ತೆರಿಗೆ ಖಾತೆಯನ್ನು ಹ್ಯಾಕ್ ಮಾಡಿದ್ದ ಎಂದು ತಿಳಿದುಬಂದಿದೆ. ಆದಾಯ ತೆರಿಗೆ ಖಾತೆಯಲ್ಲಿರುವ ಕರೀನಾ ಕಪೂರ್ ಅವರ ಮೊಬೈಲ್ ನಂಬರ್ ಪಡೆದು ಅದರ ಮೂಲಕ ಮಾತನಾಡುವ ಯೋಜನೆಯನ್ನು ಮನೀಷ್ ತಿವಾರಿ ರೂಪಿಸಿದ್ದನಂತೆ.
ಆದರೆ ಅದಕ್ಕೂ ಮೊದಲೇ ಅಭಿಮಾನಿ ಮನೀಷ್ ತಿವಾರಿ ಪೊಲೀಸರ ಅತಿಥಿಯಾಗಿದ್ದಾನೆ. ಮನೀಷ್ ತಿವಾರಿಯ ಸ್ನೇಹಿತರು ಹೇಳಿರುವಂತೆ ಆತ ಕರೀನಾ ಕಪೂರ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ನಟಿಯೊಂದಿಗೆ ಮಾತನಾಡಬೇಕು ಎಂದು ಹಲವು ಬಾರಿ ಹೇಳಿಕೊಂಡಿದ್ದನಂತೆ. ಈ ಮೊದಲು ಆರೋಪಿ ತನ್ನ ಸಹೊದ್ಯೋಗಿಗಳಿಗೆ ಆನ್‌ಲೈನ್ ತೆರಿಗೆ ಪಾವತಿ ಮಾಡಲು ಸಹಾಯ ಮಾಡುತ್ತಿದ್ದನಂತೆ.
ಇತ್ತೀಚೆಗಷ್ಟೇ ನಟಿ ಕರೀನಾ ಕಪೂರ್ ತಮ್ಮ ಆದಾಯ ತೆರಿಗೆ ಖಾತೆ ಹ್ಯಾಕ್ ಆಗಿದೆ ಎಂದು ತಮ್ಮ ಚಾರ್ಟರ್ಡ್ ಅಕೌಂಟೆಂಟ್ ಪ್ರಕಾಶ್ ಠಕ್ಕರ್ ಮೂಲಕ ಕಳೆದ ಅಕ್ಟೋಬರ್ 1ರಂದು ಸೈಬರ್ ಪೊಲೀಸ್ ಸ್ಟೇಷನ್‌ನಲ್ಲಿ ದೂರು ದಾಖಲಿಸಿದ್ದರು. ದೂರು ಪಡೆದ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿ ದೂರು ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿ ಮನೀಷ್ ತಿವಾರಿಯನ್ನು ಬಂಧಿಸಿದ್ದಾರೆ. ಬಂಧನದ ಬಳಿಕ ಆರೋಪಿ ಮನೀಷ್ ತಿವಾರಿ ಕರೀನಾರೊಂದಿಗೆ ಮಾತನಾಡುವ ಸಲುವಾಗಿ ತಾನು ಆದಾಯ ತೆರಿಗೆ ಖಾತೆಯನ್ನು ಹ್ಯಾಕ್ ಮಾಡಿರುವುದಾಗಿ ಹೇಳಿದ್ದಾನೆ. ಆರೋಪಿಯ ಮಾತು ಕೇಳಿ ಸ್ವತಃ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.
ಅಚ್ಚರಿ ಎಂದರೆ ಈ ಅಭಿಮಾನಿ ಕೇಂದ್ರ ಸಶಸ್ತ್ರ ಪಡೆಯ ಅಧಿಕಾರಿಯಾಗಿದ್ದು, ಛತ್ತೀಸ್ ಗಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ.