ಹಾಲಿವುಡ್ ಖ್ಯಾತ ನಟಿ ಮೆರಿಲ್ ಸ್ಟ್ರೀಪ್
ಮುಂಬೈ: ೭೪ ನೇ ಗೋಲ್ಡನ್ ಗ್ಲೊಬ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅಮೆರಿಕಾದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಪರೋಕ್ಷವಾಗಿ ಹರಿಹಾಯ್ದ ಹಾಲಿವುಡ್ ಖ್ಯಾತ ನಟಿ ಮೆರಿಲ್ ಸ್ಟ್ರೀಪ್ ಅವರ ಭಾಷಣ ವಿಶ್ವದಾದ್ಯಂತ ಸಂಚಲನ ಮೂಡಿಸಿದ್ದು, ಬಾಲಿವುಡ್ ಕೂಡ ಧ್ವನಿಗೂಡಿಸಿದೆ. ಬಾಲಿವುಡ್ ತಾರೆಯರಾದ ಅನುರಾಗ್ ಕಶ್ಯಪ್, ಗೌರಿ ಶಿಂದೆ ಮತ್ತು ಹನ್ಸಲ್ ಮೆಹತಾ ಮೆರಿಲ್ ಭಾಷಣವನ್ನು ಕೊಂಡಾಡಿದ್ದಾರೆ.
ಸೆಸಿಲ್ ಬಿ ಡೇಮಿಲ್ಲೆ ಪ್ರಶಸ್ತಿ ಪಡೆದ ಸ್ಟ್ರೀಪ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ "ಹೊರಗಿನಿಂದ ಬಂದವರು ಮತ್ತು ವಿದೇಶಿಯರು ಹಾಲಿವುಡ್ ಅನ್ನು ಬೆಳಗಿದ್ದಾರೆ, ನೀವು ಅವರು ಒದ್ದು ಓಡಿಸಿದರೆ, ನಮಗಿಲ್ಲಿ ಉಳಿಯುವುದು ಫುಟಬಾಲ್ ಮತ್ತು ಮಿಶ್ರಿತ ಮಾರ್ಷಿಯಲ್ ಕಲೆ, ಅದು ಎಂದಿಗೂ ಕಲೆಯಲ್ಲ" ಎಂದು ಡೊನಾಲ್ಡ್ ಟ್ರಂಪ್ ವಲಸಿಗರ ವಿರುದ್ಧ ಮಾಡಿರುವ ಪ್ರತಿಕ್ರಿಯೆಗಳನ್ನು ತೀವ್ರವಾಗಿ ಖಂಡಿಸಿದ್ದಾರೆ.
ಈ ಪ್ರತಿಕ್ರಿಯೆಗಳನ್ನು ನೀಡಿರುವ ಮೆರಿಲ್ ಧೈರ್ಯವನ್ನು ಮೆಚ್ಚಿರುವ ನಿರ್ದೇಶಕ ಅನುರಾಗ್ ಕಶ್ಯಪ್ "ನಮ್ಮ ಚಿತ್ರರಂಗದಲ್ಲಿ ಮೆರಿಲ್ ಸ್ಟ್ರೀಪ್ ಮಾಡಿರುವ ಭಾಷಣದಂತೆ ಮಾತನ್ನಾಡುವ ಅವಶ್ಯಕತೆ ಕೂಡ ಇಲ್ಲ... ಗಟ್ಟಿಯಾಗಿ ಮಾತನಾಡುವವರ ಒಟ್ಟಿಗೆ ನಿಂತರೆ ಸಾಕು" ಎಂದು ಟ್ವೀಟ್ ಮಾಡಿದ್ದಾರೆ.
ನಿರ್ದೇಶಕಿ ಗೌರಿ ಶಿಂಧೆ ಕೂಡ ಪ್ರತಿಕ್ರಿಯಿಸಿದ್ದು "ನಾವು ಅವರ ಔಚಿತ್ಯ, ಅವರ ಧೈರ್ಯವನ್ನು ಅನುಕರಿಸಬೇಕು ಅವರ ಸಿನೆಮಾಗಳನ್ನಲ್ಲ. ಮೆರಿಲ್ ಸ್ಟ್ರೀಪ್ ನಿಜವಾದ ಹೀರೊ, ನಿಜವಾದ ಸ್ಟಾರ್" ಎಂದಿದ್ದಾರೆ.
ನಟಿ ನೇಹಾ ಧೂಪಿಯಾ ಕೂಡ ಟ್ವೀಟ್ ಮಾಡಿದ್ದು "ರಾಣಿಗೆ ನಮಸ್ಕಾರ.. ಮೆರಿಲ್ ಸ್ಟ್ರೀಪ್ ಮಾತನಾಡಿದರೆ... ಹಾಲಿವುಡ್, ವಿದೇಶಿಯರು, ಮಾಧ್ಯಮ ಎಲ್ಲವು ಬಾಯಿ ಮುಚ್ಚಿ ಕೇಳಿಸಿಕೊಳ್ಳುತ್ತದೆ! ಗೋಲ್ಡನ್ ಗ್ಲೋಬ್ಸ್" ಎಂದು ಬರೆದಿದ್ದಾರೆ.
ಸಂಗೀತ ನಿರ್ದೇಶಕ ವಿಶಾಲ್ ದಾದ್ಲಾನಿ "ಇಲ್ಲಿ ಕೂಡ ಅಷ್ಟೇ ಧೈರ್ಯದಿಂದ, ಅಷ್ಟೇ ಆಳದಿಂದ ಮುಕ್ತವಾಗಿ, ಸ್ಪಷ್ಟವಾಗಿ ಮಾತನಾಡುವವವರು ಬೇಕು ಎಂದೆನಿಸುತ್ತಿದೆ. ಮೆರಿಲ್ ಸ್ಟ್ರೀಪ್ ಧನ್ಯವಾದಗಳು" ಎಂದಿದ್ದಾರೆ.
ಹನ್ಸಲ್ ಮೆಹತಾ 'ದೇವತೆ' ಎಂದು ಕರೆದಿದ್ದರೆ, ದಿಯಾ ಮಿರ್ಜಾ "ಮೆರಿಲ್ ಸ್ಟ್ರೀಪ್ ಅವರನ್ನು ಪ್ರೀತಿಸಲು ಇನ್ನಷ್ಟು ಕಾರಣಗಳು. 'ಚಲನಶೀಲ ಅನುಕಂಪ' ಕೆಲವರ ಆಯ್ಕೆ. ಅವರ ಮೇಲೆ ನನ್ನ ಗೌರವ ಹೆಚ್ಚಿದೆ" ಎಂದು ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics