ಬೆಂಗಳೂರು: ಶಿವರಾಜ್ ಕುಮಾರ್ ಮತ್ತು ಸುದೀಪ್ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿರುವ 'ದ ವಿಲನ್' ಚಿತ್ರದ ಚಿತ್ರೀಕರಣ ಸನಿಹವಾಗುತ್ತಿದ್ದು, ಸಿನೆಮಾದ ನಾಯಕನಟಿಯರು ಯಾರಿರಬಹುದು ಎಂಬ ಕುತೂಹಲ ಇದ್ದೆ ಇದೆ. ಮೊದಲಿಗೆ ತಮನ್ನಾ ಭಾಟಿಯಾ ಅವರ ಹೆಸರು ಕೇಳಿಬಂದಿತ್ತಾದರೂ, ನಂತರ ಹಲವು ಬಾಲಿವುಡ್ ನಟಿಯರ ಹೆಸರುಗಳು ಓಡಾಡುತ್ತಿದ್ದವು. ಪ್ರೇಮ್ ನಿರ್ದೇಶನದ ಈ ಚಿತ್ರಕ್ಕೆ ನಾಯಕನಾಟಿಗಾಗಿ ಇತ್ತೀಚಿಗೆ ಕೇಳಿ ಬರುತ್ತಿರುವ ಹೆಸರು ಅಮಿ ಜ್ಯಾಕ್ಸನ್.
ನಟಿ ಸದ್ಯಕ್ಕೆ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ನಟನೆಯ ೨.೦ ದಲ್ಲಿ ನಿರತರಾಗಿದ್ದಾರೆ. "ಅಮಿ ಅವರು ತಮ್ಮ ಸದ್ಯದ ಚಿತ್ರೀಕರಣ ಸಂಪೂರ್ಣಗೊಳಿಸಲು 'ದ ವಿಲನ್' ಚಿತ್ರತಂಡ ಕಾಯುತ್ತಿದೆ ನಂತರ ಅಧಿಕೃತ ಘೋಷಣೆಯಾಗಲಿದೆ" ಎನ್ನುತ್ತವೆ ಮೂಲಗಳು.
ಕನ್ನಡ ಚಿತ್ರರಂಗಕ್ಕೆ ಬಾಲಿವುಡ್ ನಟಿಯರನ್ನು ಪ್ರೇಮ್ ಕರೆತಂದಿರುವುದು ಇದೆ ಮೊದಲೇನಲ್ಲ. ಈಗಾಗಲೇ ಅವರು ಮಲ್ಲಿಕಾ ಶೆರಾವತ್ ಮತ್ತು ಸನ್ನಿ ಲಿಯೋನ್ ರನ್ನು ಕನ್ನಡ ತೆರೆಗೆ ತಂದಿದ್ದಾರೆ. ಶಂಕರ್ ಅವರ ೨.೦ ದಲ್ಲಿ ತೊಡಗಿಸಿಕೊಂಡಿರುವ ತಂತ್ರಜ್ಞರನ್ನು ಕೂಡ ತಮ್ಮ ಸಿನೆಮಾದಲ್ಲಿ ನಿಯೋಜಿಸಿಕೊಂಡಿರುವುದನ್ನು ಧೃಢೀಕರಿಸಿಕೊಂಡಿರುವ ಪ್ರೇಮ್, ಅಮಿ ಅವರನ್ನು ಕರೆತರುವ ಸಾಧ್ಯತೆಯ್ನನು ತಳ್ಳಿಹಾಕುವಂತಿಲ್ಲ.
ಬ್ರಿಟಿಷ್ ರೂಪದರ್ಶಿ ಮೊದಲು ತಮಿಳಿನ 'ಮದರ್ಶಿಪಟ್ನಮ್' ಸಿನೆಮಾದ ಮೂಲಕ ವೃತ್ತಿಜೀವನ ಪ್ರಾರಂಭಿಸಿದ್ದರು. 'ಏಕ್ ದಿವಾನ ಥಾ' ಮೂಲಕ ಬಾಲಿವುಡ್ ಪ್ರವೇಶ ಪಡೆದಿದ್ದ ನಟಿ 'ಸಿಂಗ್ ಇಸ್ ಬ್ಲಿಂಗ್' ನಲ್ಲಿ ಕೂಡ ನಟಿಸಿದ್ದರು. ಅವರು ಕೊನೆಗೆ 'ಫ್ರೀಕಿ ಅಲಿ'ಯಲ್ಲಿ ಕಾಣಿಸಿಕೊಂಡಿದ್ದರು.
ಸಿ ಆರ್ ಮನೋಹರ್ ನಿರ್ಮಾಣದ ಈ ಮೆಗಾ ಬಜೆಟ್ ಸಿನೆಮಾ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಕೂಡ ಮೂಡಿಬರಲಿದೆ ಎನ್ನಲಾಗಿದೆ.