ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟಿ ರಮ್ಯಾ ಬರ್ನಾ ಉದ್ಯಮಿಯೊಂದಿಗೆ ವಿವಾಹವಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಹುಡುಗರು, ಪಂಚರಂಗಿ, ಬುಲ್'ಬುಲ್, ಪರಮಾತ್ಮ, ಲೈಫು ಇಷ್ಟೇನೆ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದ ಖ್ಯಾತ ನಟಿ ರಮ್ಯಾ ಬರ್ನಾ ಗೌಪ್ಯವಾಗಿ ವಿವಾಹವಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಮಾಡಲಾಗಿದೆ. ಉದ್ಯಮಿ ಹಾಗೂ ಜೆಡಿಎಸ್ ಮುಖಂಡರೂ ಕೂಡ ಆಗಿರುವ ಫಹಾನ್ ಅಲಿಖಾನ್ ಅವರನ್ನು ರಮ್ಯಾ ವಿವಾಹವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಫಹಾನ್ ಅಲಿಖಾನ್ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಅವರ ಸಂಬಂಧಿ ಎಂದು ಹೇಳಲಾಗುತ್ತಿದ್ದು, ಮಾಧ್ಯಮಗಳ ವರದಿಯಂತೆ ರಮ್ಯಾ ಬರ್ನಾ ಯಾರಿಗೂ ಹೇಳದೆ ಕಳೆದ ಮೇ 29ರಂದು ಶಿವಾಜಿ ನಗರದ ಸಬ್ ರಿಜಸ್ಟ್ರಾರ್ ಕಚೇರಿಯಲ್ಲಿ ಫಹಾನ್ ಅಲಿಖಾನ್ ಅವರೊಂದಿಗೆ ಮದುವೆಯಾಗಿದ್ದಾರೆ ಎಂದು ವರದಿ ಮಾಡಲಾಗಿದೆ.
ಫಹಾದ್ ಅವರು 2010ರ ಬಿಬಿಎಂಪಿ ಚುನಾವಣೆಯಲ್ಲಿ ಜಯಮಹಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಇನ್ನು ರಮ್ಯಾ ಹಾಗೂ ಫಹಾದ್ ಅವರ ವಿವಾಹ ಸಂಬಂಧ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಶಾಸಕ ಜಮೀರ್ ಅಹಮದ್ ಖಾನ್ ಇಬ್ಬರೂ ಮದುವೆಯಾಗಿರುವ ವಿಷಯ ತಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಇನ್ನು ರಮ್ಯಾ ಅಭಿನಯದ ಹೊಸ ಚಿತ್ರ ಟಾಸ್ ಇನ್ನೇನು ಬಿಡುಗಡೆಯಾಗಲಿದ್ದು, ಇದು ನನ್ನ ಕೊನೆಯ ಚಿತ್ರ ಮುಂದೆ ಸಿನಿಮಾ ಕ್ಷೇತ್ರ ಬಿಟ್ಟು ಉದ್ಯಮದಲ್ಲಿ ತೊಡಗಿಸಿಕೊಳ್ಳುತ್ತೇನೆಂದು ಮಾಧ್ಯಮದವರಿಗೆ ತಿಳಿಸಿದ್ದರು. ಸಬ್ ರಿಜಸ್ಟ್ರಾರ್ ಕಚೇರಿಯಲ್ಲಿ ವಿವಾಹವಾಗಿರುವುದು ನಿಜ. ನಮ್ಮದು ಪ್ರೇಮ ವಿವಾಹ. ನಮ್ಮ ಪತಿ ನನಗೆ ತುಂಬ ವರ್ಷಗಳಿಂದ ಪರಿಚಯ ಎಂದು ಹೇಳಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.