ಪತ್ನಿ ಮಾನಸ ಜೊತೆ ದಿನಕರ್ ತೂಗುದೀಪ
ಬೆಂಗಳೂರು: ಕೆಲವು ವರ್ಷಗಳ ಗ್ಯಾಪ್ ನಂತರ ದಿನಕರ್ ತೂಗುದೀಪ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ.
ತಮ್ಮ ಪತ್ನಿ ಮಾನಸ ಬರೆದಿರುವ ಕಥೆಯನ್ನು ಆಧರಿಸಿ ಸಿನಿಮಾ ನಿರ್ದೇಶಿಸಲು ದಿನಕರ್ ಸಿದ್ಧತೆ ನಡೆಸಿದ್ದಾರೆ. ಉದ್ಯಮಿ ಸಮೃದ್ಧಿ ಮಂಜುನಾಥ್ ಅವರ ವಿರಾಟ್ ಸಾಯಿ ಕ್ರಿಯೇಷನ್ಸ್ ನಿರ್ಮಾಣ ಮಾಡುತ್ತಿರುವ ಚಿತ್ರಕ್ಕೆ ಲೈಫ್ ಜೊತೆ ಒಂದ್ ಸೆಲ್ಫಿ ಎಂದು ಟೈಟಲ್ ಇಡಲಾಗಿದೆ.
2011 ರಲ್ಲಿ ಸಾರಥಿ ಬಿಡುಗಡೆಯಾದ ನಂತರ ದಿನಕರ್ ತೂಗುದೀಪ ನಿರ್ದೇಶನದ ನಾಲ್ಕನೇ ಚಿತ್ರ ಇದಾಗಿದೆ.
ಉತ್ತಮ ಕಥೆಗಾಗಿ ಕಾಯುತ್ತಿದ್ದೆ, ಅದಕ್ಕಾಗಿ ಸಮಯ ಬೇಕಾಯಿತು ಎಂದು ಹೇಳಿದ್ದಾರೆ. ಜೊತೆಜೊತೆಯಲಿ ಸಿನಿಮಾ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ ದಿನಕರ್ ನವಗ್ರಹ ಸಿನಿಮಾ ನಿರ್ದೇಶಿಸಿದ್ದರು.
ಲೈಫ್ ಜೊತೆ ಒಂದ್ ಸೆಲ್ಫಿ, ಫ್ರೆಂಡ್ ಶಿಪ್ ಗೆ ಸಂಬಂಧಿಸಿದ ಕಥೆಯಾಗಿದೆ. ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಮತ್ತು ಪ್ರೇಮ್ ನಟಿಸಲಿದ್ದಾರೆ. ಈ ಇಬ್ಬರು ನಟರು ಕಥೆ ಕೇಳದೇ ನಟಿಸಲು ತಮ್ಮ ಒಪ್ಪಿಗೆ ನೀಡಿದ್ದಾರೆ. ನಾನು ಒಂದೇ ಒಂದು ಸಾಲಿನಲ್ಲಿ ಹೇಳಿದೆ, ಅವರು ಎರಡನೇ ಮಾತಿಲ್ಲದೇ ಪ್ರಾಜೆಕ್ಟ್ ನ ಭಾಗವಾಗಿರಲು ಸಮ್ಮತಿಸಿದರು ಎಂದು ಹೇಳಿದ್ದಾರೆ.
ಚಿತ್ರತಂಡ ಸದ್ಯ ನಾಯಕಿಗಾಗಿ ಹುಡುಕಾಟ ನಡೆಸುತ್ತಿದೆ, ದಿನಕರ್ ಈ ಮೊದಲು ಜೊತೆಜೊತೆಯಲಿ ಸಿನಿಮಾದಲ್ಲಿ ಪ್ರೇಮ್ ಜೊತೆ ಕೆಲಸ ಮಾಡಿದ್ದರು. ಪ್ರಜ್ವಲ್ ಜೊತೆ ಇದು ಮೊದಲ ಸಿನಿಮಾವಾಗಿದೆ. ತರುಣ್ ಸುಧೀರ್ ನಿರ್ದೇಶನದ ಚೌಕ ಚಿತ್ರದಲ್ಲಿ ಇಬ್ಬರು ನಾಯಕರು ಒಟ್ಟಾಗಿ ಕಾಣಿಸಿಕೊಂಡಿದ್ದರು.
ನಟ ಪ್ರೇಮ್ ರನ್ನು ನಾನು ಹಲವು ವರ್ಷಗಳಿಂದ ನೋಡಿದ್ದೇನೆ. ಪ್ರಜ್ವಲ್ ರಲ್ಲಿ ನನ್ನ ಸಹೋದರ ದರ್ಶನ್ ರ ಯಂಗರ್ ವರ್ಸನ್ ನೋಡುತ್ತಿದ್ದೇನೆ ಎಂದು ದಿನಕರ್ ಹೇಳಿದ್ದಾರೆ. ಪ್ರಜ್ವಲ್ ಬಾಡಿ ಲಾಂಗ್ವೇಜ್, ಡೈಲಾಗ್ ಡೆಲಿವರಿ ಸ್ಟೈಲ್ ನನಗೆ ದರ್ಶನ್ ಆರಂಭದಲ್ಲಿ ಇಂಡಸ್ಟ್ರಿಗೆ ಕಾಲಿರಿಸಿದಾಗ ಇದ್ದಂತೆ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸೆಪ್ಟಂಬರ್ 25 ರಂದು ಸಿನಿಮಾ ಶೂಟಿಂಗ್ ಆರಂಭವಾಗಲಿದ್ದು, ಗೋವಾ ಮತ್ತು ಬೆಂಗಳೂರಿನ ಕೆಲ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ತಿಳಿಸಿದ್ದಾರೆ.