ಬೆಂಗಳೂರು: 'ರಾಜು ಕನ್ನಡ ಮೀಡಿಯಂ' ಚಿತ್ರದ ನಟಿ ಆವಂತಿಕಾ ಶೆಟ್ಟಿಯವರು ನಿರ್ಮಾಪಕ ಸುರೇಶ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ.
ನಿರ್ಮಾಪಕ ಸುರೇಶ್ ಅವರು ನೀಡಿರುವ ಕಿರುಕುಳವನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಜಗಜ್ಜಾಹೀರು ಮಾಡಿರುವ ನಟಿ ಆವಂತಿಕಾ, ಚಿತ್ರರಂಗದಲ್ಲಿ ಮಹಿಳೆಯರು ಸುರಕ್ಷಿತರಾಗಿದ್ದಾರೆಯೇ?...ಚಿತ್ರೋದ್ಯಮದಲ್ಲಿರುವ ಇನ್ನೊಬ್ಬ ಹುಡುಗಿಗೆ ಈ ರೀತಿಯ ಆಗದಿರಲಿ ಎಂದು ಹೇಳಿಕೊಂಡಿದ್ದಾರೆ.
ಸಿನಿಮಾ ರಂಗದಲ್ಲಿ ಇತರೆ ಹೆಣ್ಣು ಮಕ್ಕಳಂತೆ ಇಂದು ನಾನು ಕೂಡ ಸಂತ್ರಸ್ತೆಯಾಗಿದ್ದೇನೆ. ಚಿತ್ರರಂಗದಲ್ಲಿ ಉನ್ನತ ವ್ಯಕ್ತಿಗಳೊಂದಿಗೆ ನಾನು ಕೆಲಸ ಮಾಡಿದ್ದೇನೆ. ಮಿ.ಅನೂಪ್ ಭಂಡಾರಿ, ರಂಗಿತರಂಗ ಚಿತ್ರದ ತಂಡ, ರಾಜರಥ ಚಿತ್ರ ತಂಡ ಸೇರಿದಂತೆ ಸೂಪರ್ ಸ್ಟಾರ್ ನಟ ಉಪೇಂದ್ರ ಅವರೊಂದಿಗೆ ನಾನು ಕೆಲಸ ಮಾಡಿದ್ದೇನೆ. ಎಲ್ಲರೊಂದಿಗೂ ಉತ್ತಮ ರೀತಿ ಬಾಂಧವ್ಯವಿತ್ತು. ಎಲ್ಲರ ಮೇಲೂ ನನಗೆ ಅಪಾರವಾದ ಗೌರವವಿದೆ. ಆದರೆ, ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಿರ್ಮಾಪಕ ಕೆ ಸುರೇಶ್ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.
ಇತ್ತೀಚೆಗಷ್ಟೇ ನನ್ನ ಕುರಿತಂತೆ ಸುರೇಶ್ ಅವರು ಮಾತನಾಡಿದ್ದ ಮಾಧ್ಯಮಗಳ ವರದಿಗಳನ್ನು ನೋಡಿದ್ದೆ. ಸುರೇಶ್ ಅವರು ನನ್ನ ಮೇಲೆ ಆಧಾರ ರಹಿತ ಆರೋಪಗಳನ್ನು ಮಾಡಿದ್ದಾರೆ. ಚಿತ್ರೀಕರಣಕ್ಕೆ ಸ್ಪಂದಿಸುತ್ತಿಲ್ಲ ಎಂಬ ಕಾರಣ ನೀಡಿ ನಿರ್ಮಾಪಕ ಸುರೇಶ್ ಅವರು ತಮ್ಮ ಚಿತ್ರದಿಂದ ಹೊರಗೆ ಕಳುಹಿಸಿದ್ದರು. ಸಮಯಕ್ಕೆ ಸರಿಯಾಗಿ ಚಿತ್ರೀಕರಣಕ್ಕೆ ಬರುತ್ತಿಲ್ಲ ಎಂಬ ಆರೋಪ ಮಾಡಿದ್ದಾರೆ. ಇದು ನಿಜಕ್ಕೂ ಸರಿಯಲ್ಲ. ಹಲವು ಕಾರಣಗಳಿಂದ ನಾನು ಸೆಟ್ ನಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದೆ. ಸಿನಿಮಾದಲ್ಲಿ ನನ್ನ ಪಾತ್ರದ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿತ್ತು. ಕೆಲ ಭಾಗ ಮಾತ್ರ ಬಾಕಿ ಉಳಿದಿತ್ತು. ಬ್ಯಾಂಕಾಕ್ ನಲ್ಲಿ ಚಿತ್ರೀಕರಣ ನಡೆಯಬೇಕಿತ್ತು. ನನ್ನಿಂದ ಸಾಧ್ಯವಾದಕ್ಕಿಂತಲೂ ಅತ್ಯುತ್ತಮವಾಗಿ ನಟನೆ ಮಾಡುವ ಪ್ರಯತ್ನ ಮಾಡಿದ್ದೇನೆ.
ಚೆಕ್ ಬೌನ್ಸ್ ಆಗಿದೆ ಎಂದು ನಾನು ಹೇಳಿದ ಕೂಡಲೇ ನಟನೆ ಸರಿಯಿಲ್ಲ ಎಂಬ ಕಾರಣ ನೀಡಿ ನನ್ನನ್ನು ಚಿತ್ರದಿಂದ ತೆಗೆದುಹಾಕಿದ್ದಾರೆ. ನಿಜಕ್ಕೂ ಇದು ನನಗೆ ಆಘಾತವನ್ನುಂಟು ಮಾಡಿತು. ಕೊಡಬೇಕಿದ್ದ ಹಣವನ್ನು ನನಗೆ ಸರಿಯಾಗಿ ನೀಡಿಲ್ಲ. ಚೆಕ್ ಬೌನ್ಸ್ ಕುರಿತಂತೆ ಈಗಾಗಲೇ ನಾನು ದೂರು ದಾಖಲಿಸಿದ್ದೇನೆಂದು ಆವಂತಿಕಾ ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos