ಸಿನಿಮಾ ಸುದ್ದಿ

'ಕುರುಕ್ಷೇತ್ರ'ದ ಸಂಗೀತ ಕಹಳೆ ಮೊಳಗಿಸಲು ಸಿದ್ಧರಾಗುತ್ತಿರುವ ಹರಿಕೃಷ್ಣ

Guruprasad Narayana
ಬೆಂಗಳೂರು: ಹಲವು ಜನಪ್ರಿಯ ಚಿತ್ರಗಳಿಗೆ ಸಂಗೀತ ನೀಡಿ, ಪ್ರೇಕ್ಷಕರ ಮನಗೆದ್ದಿರುವ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಅವರಿಗೆ ಹೊಸದೊಂದು ಸವಾಲು ಈಗ ಎದುರಿಗಿದೆ. ನಟ ದರ್ಶನ್ ಅವರ ೫೦ನೆಯ ಚಿತ್ರ ಐತಿಹಾಸಿಕ ಮಹಾಭಾರತ ಕಥೆಯು 'ಕುರುಕ್ಷೇತ್ರ'ಕ್ಕೆ ಅವರು ಸಂಗೀತ ನೀಡಲಿದ್ದಾರೆ. 
ಈ ಹಿಂದೆ ಐತಿಹಾಸಿಕ ಸಿನೆಮಾ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸಿನೆಮಾಗೆ ಹರಿಕೃಷ್ಣ ಹಿನ್ನಲೆ ಸಂಗೀತ ಒದಗಿಸಿದ್ದರೂ, ಇದೆ ಮೊದಲ ಬಾರಿಗೆ ಐತಿಹಾಸಿಕ ಸಿನೆಮಾವೊಂದಕ್ಕೆ ಸಂಪೂರ್ಣ ಸಂಗೀತ ನೀಡುತ್ತಿರುವುದು. ಈ ನಿಟ್ಟಿನಲ್ಲಿ ಹರಿಕೃಷ್ಣ ಆಗಲೇ ಕಾರ್ಯೋನ್ಮುಖರಾಗಿದ್ದಾರೆ. 
"ನಾವು ಕೇಳಿಕೊಂಡು ಬೆಳೆದಿರುವ ಪಾತ್ರಗಳುಳ್ಳ ಕಥೆ ಇದು. ನಾವು ಇವುಗಳ ಬಗ್ಗೆ ಸಾಕಷ್ಟು ಕೇಳಿದ್ದೇವೆ, ಟಿವಿಯಲ್ಲಿ ನೋಡಿದ್ದೇವೆ. ಇವೆಲ್ಲ ದಂತಕಥೆಗಳು... ಕೃಷ್ಣ, ದುರ್ಯೋಧನ, ಅರ್ಜುನ, ಕರ್ಣ, ಭೀಮ. ಆದುದರಿಂದ ಇಂತಹ ಸಿನೆಮಾಗೆ ಸಂಗೀತ ನೀಡುತ್ತಿರುವುದಕ್ಕೆ ಅತಿ ಹೆಚ್ಚಿನ ಸಂತೋಷವಾಗಿದೆ. ಇದು ದರ್ಶನ್ ಅವರ ಮೈಲಿಗಲ್ಲಿನ ಸಿನೆಮಾ ಕೂಡ ಮತ್ತು ಇದು ನನ್ನ ಉತ್ಸಾಹವನ್ನು ಇಮ್ಮಡಿಗೊಳಿಸಿದೆ" ಎನ್ನುತ್ತಾರೆ ಹರಿಕೃಷ್ಣ. 
ಹಾಡುಗಳ ರೆಕಾರ್ಡಿಂಗ್ ಆಗಲೇ ಪ್ರಾರಂಭವಾಗಿದ್ದು, ಸಿನೆಮಾದಲ್ಲಿ ೮ ಹಾಡುಗಳು ಇರಲಿವೆಯಂತೆ. "ಈಗ ಎರಡು ಹಾಡುಗಳನ್ನು ಮುಗಿಸಿದ್ದೇನೆ" ಎನ್ನುವ ಹರಿಕೃಷ್ಣ "ನನ್ನ ಜೊತೆಗೆ ಗೀತರಚನಕಾರ ನಾಗೇಂದ್ರ ಪ್ರಸಾದ್, ಜೆ ಕೆ ಭೈರವಿ ಮತ್ತು ನಿರ್ದೇಶಕ ನಾಗಣ್ಣ ಇದ್ದಾರೆ. ಅವರೆಲ್ಲರೂ ಈ ಮಹಾಕಾವ್ಯದ ಮೇಲಿನ ಪ್ರೀತಿಯಿಂದ ನನಗೆ ಸಹಾಯ ಮಾಡುತ್ತದ್ದಾರೆ" ಎನ್ನುತ್ತಾರೆ. 
ಮುನಿರತ್ನ ನಿರ್ಮಿಸುತ್ತಿರುವ ಈ ದೊಡ್ಡ ಬಜೆಟ್ ಚಿತ್ರದಲ್ಲಿ ದರ್ಶನ್ ದುರ್ಯೋಧನನ ಪಾತ್ರ ಮಾಡುತ್ತಿದ್ದರೆ, ರವಿಚಂದ್ರನ್ ಕೃಷ್ಣನಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದ ತಾರಾಗಣದ ಬಗ್ಗೆ ಚಿತ್ರತಂಡ ತುಟಿಬಿಚ್ಚುತ್ತಿಲ್ಲ. ನಿರ್ಮಾಪಕರ ಹುಟ್ಟುಹಬ್ಬವಾದ ಜುಲೈ ೨೩ ರಂದು ಸಿನೆಮಾಗೆ ಚಾಲನೆ ಸಿಗಲಿದೆ ಎನ್ನಲಾಗಿದೆ.
SCROLL FOR NEXT