ಸಿನಿಮಾ ಸುದ್ದಿ

ವಿಭಿನ್ನ ಪಾತ್ರಗಳ ಮೊರೆ ಹೋದ ಸೋನು; ಶಾಲಿನಿ ಐಎಎಸ್ ನಲ್ಲಿ ನಟನೆ

Guruprasad Narayana
ಬೆಂಗಳೂರು: ನಟಿ ಸೋನು ಗೌಡ ಆಯ್ಕೆ ಮಾಡಿಕೊಳ್ಳುತ್ತಿರುವ ಇತ್ತೀಚಿನ ಚಿತ್ರಗಳನ್ನು ಗಮನಿಸಿದರೆ, ಅವರು ಮಾಮೂಲಿತನದ ಕಥೆಗಳಿಂದ ಹೊರಬಂದು ವಿಭಿನ್ನ ಪಾತ್ರಗಳ ಮೊರೆಹೋಗುತ್ತಿದ್ದಾರೆ. ಚಂಬಲ್, ಶರಾವತಿ ತೀರದಲ್ಲಿ, ಗುಲ್ಟು ಸಿನೆಮಾಗಳಲ್ಲಿ ನಟಿಸುತ್ತಿರುವ ಸೋನು ಈಗ ಶಾಲಿನಿ ಐಎಎಸ್ ನಲ್ಲಿಯು ಪಾತ್ರ ಪಡೆದಿದ್ದಾರೆ. "ಕೆಲವು ದಿನ ಪಾತ್ರಗಳನ್ನೂ ಆಯ್ಕೆ ಮಾಡಿಕೊಳ್ಳುವ ವಿಚಾರದಲ್ಲಿ ಹೆಚ್ಚು ಚಿಂತಿಸುತ್ತಿರಲಿಲ್ಲ" ಎನ್ನುವ ಅವರು "ಈಗ ಎಚ್ಚೆತ್ತುಕೊಂಡಿದ್ದೇನೆ. ತಾಳ್ಮೆಯಿಂದ ಕಾದಿದ್ದು ಈಗ ಫಲ ನೀಡುತ್ತಿದ್ದು, ಒಳ್ಳೆಯ ಸ್ಕ್ರಿಪ್ಟ್ ಗಳು ನನ್ನೆಡೆಗೆ ಬರುತ್ತಿವೆ" ಎನ್ನುತ್ತಾರೆ. 
ಡಿಸೆಂಬರ್ ೨೦೧೫ ರಲ್ಲಿ ನಟಿಸಿದ್ದ ರಂಗಭೂಮಿ ನಾಟಕ ಇ ಎಂ ಸಿ ಸ್ಕ್ವೇರ್ ನಂತರ ನಟಿ ಆಯ್ಕೆಗಳ ಬಗ್ಗೆ ಗಂಭೀರವಾಗಿದ್ದಂತೆ. "ನಾನು ಈ ನಾಟಕದಲ್ಲಿ ಮಾತಂಗಿ ಪಾತ್ರವನ್ನು ಅಭಿನಯಿಸಿದ್ದೆ ಮತ್ತು ಇದಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು. ಇದು ಬೇರೆ ಮಾಧ್ಯಮವಾದರೂ, ಅಲ್ಲಿ ಕಲಿತ ಪಾಠವನ್ನು ಸಿನೆಮಾಗಳಲ್ಲಿ ಅಳವಡಿಸಿಕೊಂಡೆ. ಸಿನೆಮಾದಲ್ಲಿ ಪ್ರತಿ ಪಾತ್ರವು ಮುಖ್ಯ ಎಂಬುದನ್ನು ಈಗ ಅರಿತಿದ್ದೇನೆ" ಎನ್ನುತ್ತಾರೆ ಸೋನು. 
ಐ ಎ ಎಸ್ ಅಧಿಕಾರಿಗಳಾದ ಶಾಲಿನಿ ರಜನೀಶ್ ಮತ್ತು ರಜನೀಶ್ ಗೋಯೆಲ್ ಅವರ ಐ ಎ ಎಸ್ ದಂಪತಿಯ ಕನಸುಗಳು ಪುಸ್ತಕದ ಆಧಾರಿತ ಸಿನೆಮಾ 'ಶಾಲಿನಿ ಐಎಎಸ್'. ಇದನ್ನು ನಿಖಿಲ್ ಮಂಜು ನಿರ್ದೇಶಿಸಲಿದ್ದು, ಜುಲೈ ಎರಡನೇ ವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. 
ಸಿನೆಮಾದ ಕೆಲವು ಭಾಗಗಳು ಪಾಕಿಸ್ತಾನದಲ್ಲಿಯೂ ಚಿತ್ರೀಕರಣಗೊಳ್ಳಲಿದ್ದು, ಇದಕ್ಕಾಗಿ ಪರವಾನಗಿ ಪಡೆಯಲು ಚಿತ್ರತಂಡ ಕಾಯುತ್ತಿದೆ. "ಶಾಲಿನಿ ಅವರು ಹುಟ್ಟಿದ್ದು ಪಾಕಿಸ್ತಾನದಲ್ಲಿ ಮತ್ತು ಅವರ ಪೂರ್ವಜರು ಆ ದೇಶದವರು. ಆದುದರಿಂದ ಅದನ್ನು ನೈಜವಾಗಿ ಮೂಡಿಸಲು ಅಲ್ಲಿ ಚಿತ್ರೀಕರಣ ಅಗತ್ಯವಾಗಿದೆ" ಎನ್ನುವ ಸೋನು "ನನ್ನ ಭಾಗ ಗದಗ್ ನಿಂದ ಪ್ರಾರಂಭವಾಗಲಿದೆ" ಎನ್ನುತ್ತಾರೆ. ಈ ಸಿನೆಮಾದಲ್ಲಿ ರೋಜರ್ ನಾರಾಯಣ್ ಮತ್ತು ಅಶ್ವಿನಿ ಕೂಡ ನಟಿಸಲಿದ್ದಾರೆ. 
ಈ ಪಾತ್ರದಲ್ಲಿ ಅಭಿನಯಿಸಲು ಸೋನು, ಶಾಲಿನಿ ಅವರಿಂದ ಹಲವು ಮಾಹಿತಿಗಳನ್ನು ಕೂಡ ಪಡೆಯುತ್ತಿದ್ದಾರಂತೆ. "ಶಾಲಿನಿ ಅವರ ಅತ್ಯುತ್ತಮ ಲಕ್ಷಣ ಎಂದರೆ ಅವರ ನಗು ಮತ್ತು ಮುಗ್ಧತೆ" ಎನ್ನುತ್ತಾರೆ ನಟಿ.
SCROLL FOR NEXT