ಬೆಂಗಳೂರು: ಕೆ ಎಂ ಚೈತನ್ಯ ನಿರ್ದೇಶನದ 'ಆಕೆ' ಬಿಡುಗಡೆಗೆ ಸಿದ್ಧವಾಗಿದ್ದು, ಸಿನೆಮಾದ ನಟರು ಹಾರರ್ ಪ್ರಕಾರದ ಅಭಿಮಾನಿಗಳೆಂದು ಹೇಳಿಕೊಳ್ಳುತ್ತಾರೆ.
ಸಿನೆಮಾದ ಮುಖ್ಯ ನಟ ಚಿರಂಜೀವಿ ಸರ್ಜಾ ಅವರ ವೃತ್ತಿಜೀವನ ಆರಂಭವಾದದ್ದೇ ಹಾರರ್ ಸಿನೆಮಾ 'ಚಂದ್ರಲೇಖಾ'ದಿಂದ ಮತ್ತು ಅದು 'ವಿಸಲ್', 'ಆಟಗಾರ' ಮತ್ತು ಈಗ 'ಆಕೆ' ಮೂಲಕ ಮುಂದುವರೆದಿದೆ.
ಈಗಿನ ಕಾಲದ ಹಾರರ್ ಸಿನೆಮಾಗಳಲ್ಲಿ ತಂತ್ರಜ್ಞಾನ ಮತ್ತು ಜಾಣತನ ಬೆರೆತಿರುತ್ತದೆ ಎನ್ನುವ ಚಿರು "ಯಾವ ಸಿನೆಮಾ ಕೂಡ ಒಬ್ಬನಿಂದ ನಿಲ್ಲುವುದಿಲ್ಲ, ಇದು ತಂಡದ ಪರಿಶ್ರಮ. 'ಆಕೆ' ಸಿನೆಮಾದಲ್ಲಿ ಚೈತನ್ಯ ಮತ್ತು ಯೋಗೀಶ್ ದ್ವಾರಕೀಶ್ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಇಬ್ಬರೂ ಸಂಪೂರ್ಣ ಸ್ವಾತಂತ್ರ್ಯ ನೀಡಿ ಹಲವು ಸಲಹೆಗಳನ್ನು ನೀಡಿದರು" ಎನ್ನುತ್ತಾರೆ.
"ನಾನು ಯಾವುದೇ ಹಾರರ್ ಸಿನೆಮಾವನ್ನು ಹೆದರಿಕೆಯಿಲ್ಲದೆ ಒಬ್ಬನೇ ನೋಡಬಲ್ಲೆ" ಎನ್ನುವ ಚಿರು ತಮ್ಮ ಮುಂದಿನ ಸಿನೆಮಾ ಕೂಡ ಚೈತನ್ಯ ಅವರೊಂದಿಗೆ ಎಂದು ತಿಳಿಸಿಡುತ್ತಾರೆ.
ಚಿತ್ರೀಕರಣದ ವೇಳೆ ಕನಸಿನಿಂದ ಭಯಭೀತರಾಗಿದ್ದ ಶರ್ಮಿಳಾ
'ಆಕೆ' ನಟಿ ಶರ್ಮಿಳಾ ಮಾಂಡ್ರೆ ಅವರಿಗೆ ಇದು ಮೊದಲ ಹಾರರ್ ಸಿನೆಮಾ ಅನುಭವ. ಈ ಅನುಭವ ರಾತ್ರಿಯ ವೇಳೆಯಲ್ಲಿ ಕೆಟ್ಟ ಕನಸುಗಳು ಬೀಳುವುದಕ್ಕೆ ಕಾರಣವಾಗಿದ್ದಲ್ಲದೆ ಭಯಭೀತಳನ್ನಾಗಿಸಿತ್ತು ಎನ್ನುತ್ತಾರೆ ನಟಿ.
"ನನಗೆ ಹಾರರ್ ಸಿನೆಮಾಗಳನ್ನು ನೋಡುವುದು ಇಷ್ಟ ಮತ್ತು ಅದು ನೀಡುವ ಥ್ರಿಲ್ ಇಷ್ಟ ಪಡುತ್ತೇನೆ" ಎನ್ನುತ್ತಾರೆ.
"ಚೈತನ್ಯ ಜೊತೆಗೆ ಕಥೆ ಚರ್ಚಿಸಿದ ರಾತ್ರಿ ಕೆಟ್ಟ ಕನಸೊಂದು ಬಿದ್ದಿತ್ತು" ಎಂದು ನೆನಪಿಸಿಕೊಳ್ಳುವ ನಟಿ ಅದೇ ಕನಸು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿತ್ತು ಎನ್ನುತ್ತಾರೆ.
'ಆಕೆ' ಸಿನೆಮಾ ನಾಳೆ ಶುಕ್ರವಾರ ಬಿಡುಗಡೆಯಾಗಲಿದೆ.