ಕೊಚ್ಚಿ: ದಕ್ಷಿಣ ಭಾರತದ ಖ್ಯಾತ ನಟಿಯ ಅಪಹರಣ ಹಾಗೂ ಲೈಂಗಿಕ ದೌರ್ನಜ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲೆಯಾಳಂ ನಟ ದಿಲೀಪ್, ಅವರ ಸಹಾಯಕ ಅಪ್ಪುನಿ ಹಾಗೂ ಚಿತ್ರ ನಿರ್ಮಾಪಕ ನಾದಿರ್ ಶಾ ಅವರನ್ನು ಪೊಲೀಸರು ಸುಮಾರು 13 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ಅಗತ್ಯ ಬಿದ್ದರೆ ಮತ್ತೆ ವಿಚಾರಣೆಗೆ ಒಳಪಡಿಸುವುದಾಗಿ ಗುರುವಾರ ಪೊಲೀಸರು ತಿಳಿಸಿದ್ದಾರೆ.
ನಟಿ ಮೇಲಿನ ಲೈಂಗಿಕ್ಕೆ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲೆಯಾಳಂ ನಟನಿಗೆ ಪೊಲೀಸರು ಕ್ಲೀನ್ ಚಿಟ್ ನೀಡಿಲ್ಲ. ತನಿಖೆ ನಡೆಯುತ್ತಿದ್ದು, ಅಗತ್ಯ ಬಿದ್ದರೆ ಮತ್ತೆ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಎರ್ನಾಕುಲಂ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಎ ವಿ ಜಾರ್ಜ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಎಡಿಜಿಪಿ ಬಿ ಸಂಧ್ಯಾ ನೇತೃತ್ವದ ತನಿಖಾ ತಂಡ, ಬುಧವಾರ ವಿಚಾರಣೆ ವೇಳೆ ದಿಲೀಪ್ ಹಾಗೂ ನಾದಿರ್ ಶಾ ನೀಡಿದ ಹೇಳಿಕೆಗಳನ್ನು ಪುನರ್ ಪರಿಶೀಲಿಸುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಳೆದ ಫೆಬ್ರವರಿಯಲ್ಲಿ ನಡೆದ ನಟಿಯ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧಿಸಿದಂತೆ ಈ ಮೂವರು ಆರೋಪಿಗಳನ್ನು ನಿನ್ನೆ ಮಧ್ಯಾಹ್ನ 12.39ರಿಂದ ಮಧ್ಯ ರಾತ್ರಿ 1.15ರವರೆಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಈ ಮಧ್ಯೆ ಕರ್ನಾಟಕ ಉದ್ಯಮಿಯನ್ನು ಮದುವೆಯಾಗುತ್ತಿರುವ ಮಲಯಾಳಂ ನಟಿಯನ್ನು ಅಪಹರಿಸಿ ಸಾಮೂಹಿಕವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದ ಪ್ರಕರಣದ ರೂವಾರಿ ಪಲ್ಸರ್ ಸುನಿ ಚಿತ್ರರಂಗದ ಹಲವು ಘಟಾನುಘಟಿಗಳ ಹೆಸರನ್ನು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ ಎನ್ನಲಾಗುತ್ತಿದೆ.