ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ-ನಟ ಗೌತಮ್ ಘೋಸ್
ಕೋಲ್ಕತ್ತಾ: ವಿಶ್ವಪ್ರಸಿದ್ಧ ಇರಾನ್ ನಿರ್ದೇಶಕ ಮಜೀದ್ ಮಜಿದಿ ಅವರು ಭಾರತದ ಹಿನ್ನಲೆಯಲ್ಲಿ ನಿರ್ದೇಶಿಸುತ್ತಿರುವ ಮೊದಲ ಸಿನೆಮಾ 'ಬಿಯಾಂಡ್ ದ ಕ್ಲೌಡ್ಸ್' ಸಿನೆಮಾದಲ್ಲಿ ಪಾತ್ರ ಪಡೆದಿರುವ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ-ನಟ ಗೌತಮ್ ಘೋಸ್ ತಮ್ಮ ಭಾಗದ ಚಿತ್ರೀಕರಣವನ್ನು ಬಹುತೇಕ ಮುಗಿಸಿದ್ದಾರೆ.
"ಮಜಿದಿ ಸಿನೆಮಾದಲ್ಲಿ ನನ್ನ ಭಾಗದ ಚಿತ್ರೀಕರಣವನ್ನು ಬಹುತೇಕ ಮುಗಿಸಿದ್ದೀನಿ" ಎಂದು ಖ್ಯಾತ ನಿರ್ದೇಶಕ-ನಟ ಹೇಳಿದ್ದಾರೆ.
ಈ ಹಿಂದೆ ಗೌತಮ್, ಶ್ರೀಜಿತ್ ಮುಖರ್ಜಿ ಅವರ 'ಬೈಷೆ ಸ್ರಬೊನ್' ಮತ್ತು 'ಚತುಷ್ಕೊನ್' ಸಿನೆಮಾಗಳಲ್ಲಿ ನಟಿಸಿದ್ದರು.
ಸದ್ಯಕ್ಕೆ ಮುಂಬೈ ನಲ್ಲಿ ಚಿತ್ರೀಕರಣಗೊಳ್ಳುತ್ತಿರುವ 'ಬಿಯಾಂಡ್ ದ ಕ್ಲೌಡ್ಸ್', ಇರಾನಿಯನ್ ನಿರ್ದೇಶಕ ಮಜಿದಿ ಅವರ ಮೊದಲ ಭಾರತೀಯ ಸಿನೆಮಾವಾಗಲಿದೆ ಮತ್ತು ಬಾಲಿವುಡ್ ನಟ ಶಾಹಿದ್ ಕಪೂರ್ ಅವರ ಸಹೋದರ ಇಶಾನ್ ಖಟ್ಟರ್ ಅವರ ಪಾದಾರ್ಪಣೆ ಕೂಡ ಈ ಸಿನೆಮಾದ ಮೂಲಕವೇ ಆಗಲಿದೆ.
ಜೀ ಸ್ಟುಡಿಯೋಸ್ ಮತ್ತು ಐಕ್ಯಾಂಡಿ ಫಿಲಂಸ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಸಿನೆಮಾ ಮಾನವನ ಸೂಕ್ಷ್ಮ ಸಂಬಂಧಗಳ ಸುತ್ತ ಸುತ್ತಲಿದೆ.
ಎ ಆರ್ ರಹಮಾನ್ ಈ ಸಿನೆಮಾಗೆ ಸಂಗೀತ ನೀಡುತ್ತಿದ್ದು, 'ಮೊಹಮದ್: ದ ಮೆಸೆಂಜರ್ ಆಫ್ ಗಾಡ್' ಸಿನೆಮಾದ ನಂತರ ಮಜಿದಿ ಅವರೊಂದಿಗೆ ಎರಡನೇ ಸಿನೆಮಾ ಇದು.