'ಮುನ್ನ ಮೈಕೆಲ್' ಸಿನೆಮಾ ಕ್ಲೈಮಾಕ್ಸ್ ಚಿತ್ರೀಕರಣಕ್ಕೂ ಮುನ್ನ
ಬೆಂಗಳೂರು: ಬಾಲಿವುಡ್ ಜನಪ್ರಿಯ ನಟರಾದ ಶಾರುಖ್ ಖಾನ್, ಸಲ್ಮಾನ್ ಖಾನ್, ಶಾಹಿದ್ ಕಪೂರ್ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗಗಳಲ್ಲಿಯೂ ಸಾಹಸ ನಿರ್ದೇಶನಕ್ಕೆ ಹೆಸರುವಾಸಿಯಾದ ರವಿವರ್ಮ ಈಗ 'ಮುನ್ನ ಮೈಕೆಲ್' ಸಿನೆಮಾದಲ್ಲಿ ಟೈಗರ್ ಶ್ರಾಫ್ ಜೊತೆಗೆ ಕೆಲಸ ಮಾಡುವುದಕ್ಕೆ ಥ್ರಿಲ್ ಆಗಿದ್ದಾರೆ. ರವಿವರ್ಮ, ಟೈಗರ್ ಜೊತೆಗೆ ಕೆಲಸ ಮಾಡುತ್ತಿರುವ ಫೋಟೋಗಳು ಈಗ ಲಭ್ಯವಾಗಿವೆ.
ಬೃಹತ್ ಸೆಟ್ ನಲ್ಲಿ ನಡೆದ ಕ್ಲೈಮಾಕ್ಸ್ ಚಿತ್ರೀಕರಣಕ್ಕೆ ಸಾಹಸ ನಿರ್ದೇಶನ ಮಾಡಲು ಈ ಸ್ಟಂಟ್ ನಿರ್ದೇಶಕ ಕಳೆದ ಆರು ದಿನಗಳಿಂದ ಮುಂಬೈನಲ್ಲಿದ್ದಾರೆ.
"ಟೈಗರ್ ಅವರ ಹಾಲಿವುಡ್ ಶೈಲಿಯ ಆಕ್ಷನ್ ಮತ್ತು ಸ್ಟಂಟ್ ಗಳನ್ನು ನೋಡಿ ದಂಗಾದೆ. ಯಾವುದೇ ಕೇಬಲ್ ಅಥಾವ ಹಗ್ಗ ಬಳಸಿ ತಾವೇ ಸ್ಟಂಟ್ ಮಾಡುವುದಕ್ಕೆ ಅವರು ದೊಡ್ಡ ರಿಸ್ಕ್ ಗಳನ್ನು ತೆಗೆದುಕೊಳ್ಳುತ್ತಾರೆ. ಇಂತಹ ಯುವಕರ ಜೊತೆಗೆ ಕೆಲಸ ಮಾಡುವುದು ಅದ್ಭುತ ಅನುಭವವಾಗಿತ್ತು" ಎನ್ನುತ್ತಾರೆ ರವಿವರ್ಮ.
'ಮುನ್ನ ಮೈಕೆಲ್' ಸಬೀರ್ ಖಾನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ. ಈ ಸಿನೆಮಾದಲ್ಲಿ ನಿಧಿ ಅಗರವಾಲ್ ಕೂಡ ಪಾದಾರ್ಪಣೆ ಮಾಡಲಿದ್ದಾರೆ. ನವಾಜುದ್ದೀನ್ ಸಿದ್ದಿಕಿ ಕೂಡ ತಾರಾಗಣದ ಭಾಗವಾಗಿದ್ದಾರೆ.