ಪುನೀತ್ ರಾಜಕುಮಾರ್-ಆದರ್ಶ್ ಕೆ ಈಶ್ವರಪ್ಪ
ಬೆಂಗಳೂರು: ಜನಮನ ಸೆಳೆದಿದ್ದ ಆದರ್ಶ್ ಕೆ ಈಶ್ವರಪ್ಪ ಅರವ ಚೊಚ್ಚಲ ನಿರ್ದೇಶನದ 'ಶುದ್ಧಿ' ಟ್ರೇಲರ್ ಈಗ ತಾರಾನಟ ಪುನೀತ್ ರಾಜಕುಮಾರ್ ಅವರ ಗಮನ ಸೆಳೆದಿದೆ. ಟ್ರೇಲರ್ ಗೆ ಮೆಚ್ಚುಗೆ ಸೂಚಿಸಿರುವ ಪುನೀತ್ ಸಿನೆಮಾ ನೋಡಲು ಉತ್ಸುಕರಾಗಿರುವುದಾಗಿ ಆದರ್ಶ್ ಅವರಿಗೆ ಹೇಳಿದ್ದಾರಂತೆ.
"'ಅಂಜನಿಪುತ್ರ' ಸಿನೆಮಾ ಸೆಟ್ ನಲ್ಲಿ ಬ್ಯುಸಿಯಾಗಿರುವ ಪುನೀತ್ ನಮ್ಮ ಸಿನೆಮಾದ ಟ್ರೇಲರ್ ವೀಕ್ಷಿಸಿದರು" ಎಂದು ತಿಳಿಸುವ ಆದರ್ಶ್ "ಸೆನ್ಸಾರ್ ಪ್ರಮಾಣಪತ್ರ ದೊರಕಿದ ಮೇಲೆ ಸಿನೆಮಾ ವೀಕ್ಷಿಸಲು ಬಯಸುವುದಾಗಿ ಹೇಳಿದ್ದರು. ಈಗ ಸೆನ್ಸಾರ್ ಪ್ರಕ್ರಿಯೆ ಮುಗಿದಿದೆ. ನಿರ್ದೇಶಕ ಎ ಹರ್ಷ ಮತ್ತು ನಟಿ ರಶ್ಮಿಕಾ ಮಂದಣ್ಣ ಕೂಡ ಟ್ರೇಲರ್ ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದರು" ಎನ್ನುತ್ತಾರೆ.
ನಿಜ ಘಟನೆಗಳ ಮೇಲೆ ಆದರ್ಶ್ ಅವರ 'ಶುದ್ಧಿ' ಸಿನೆಮಾ ಚಿತ್ರೀಕರಣಗೊಂಡಿದೆ. ಅಮೆರಿಕಾದ ಹುಡುಗಿ ಲಾರೆನ್ ಸ್ಪಾರ್ತನೋ ಪಾತ್ರವೊಂದನ್ನು ನಿರ್ವಹಿಸಿದ್ದು, ಅವರು ಭಾರತಕ್ಕೆ ಆಧ್ಯಾತ್ಮ ಪ್ರವಾಸ ಬರುವ ಕಥೆ ಮತ್ತು ದ್ವೇಷದ ಕಥೆಯನ್ನು ಸಿನೆಮಾ ಹೆಣೆಯುತ್ತದೆ. ನಟಿ ನಿವೇದಿತಾ ಮತ್ತು ಅಮೃತ ಕರಗದ ಕೂಡ ಮುಖ್ಯಭೂಮಿಕೆಯಲ್ಲಿದ್ದಾರೆ.
ಪುನೀತ್ ಅವರು ಸಿನೆಮಾ ನೋಡುವ ಭರವಸೆ ನೀಡಿದ್ದಲ್ಲದೆ, ಒಳ್ಳೆಯ ಕಥೆ ಸಿಕ್ಕಾಗ ಕಾಣುವಂತೆ ಹೇಳಿರುವುದು ಕೂಡ ಆದರ್ಶ್ ಅವರ ಸಂತಸವನ್ನು ಇಮ್ಮಡಿಗೊಳಿಸಿದೆ. "'ಶುದ್ಧಿ' ಸಿನೆಮಾದ ಪ್ರಚಾರಕ್ಕೆ ಕೂಡ ಪುನೀತ್ ನಮಗೆ ಸಲಹೆಗಳನ್ನು ನೀಡಿದರು. ಕಾಲೇಜುಗಳಿಗೆ ಭೇಟಿ ನೀಡಿ ದೊಡ್ಡ ಪ್ರಮಾಣದಲ್ಲಿ ಟಿಕೆಟ್ ಗಳನ್ನು ಬುಕ್ ಮಾಡಿಕೊಳ್ಳುವ ಸಲಹೆ ಕೂಡ ನೀಡಿದರು. ದೊಡ್ಡ ನಟ ಈ ಸಲಹೆಗಳನ್ನು ನೀಡಿದ್ದು ನಮ್ಮ ಸಿನೆಮಾಗೆ ಒಳ್ಳೆಯ ಬೆಳವಣಿಗೆ" ಎನ್ನುತ್ತಾರೆ.