ಸಿನಿಮಾ ಸುದ್ದಿ

'ಹ್ಯಾಪಿ ನ್ಯೂ ಇಯರ್' ಸಂತಸಮಯ ಚಿತ್ರ ಎಂದ ನಿರ್ದೇಶಕ ಪನ್ನಗ ಭರಣ

Guruprasad Narayana
ಬೆಂಗಳೂರು: ಮಲ್ಟಿಪ್ಲೆಕ್ಸ್ ಗಳಲ್ಲಿ ಟಿಕೆಟ್ ಬೆಲೆ ಗರಿಷ್ಟ ೨೦೦ರೂ ನಿಗದಿಪಡಿಸರುವ ಸರ್ಕಾರದ ಆದೇಶ ಇಂದಿನಿಂದ ಜಾರಿಗೆ ಬಂದಿದ್ದು, 'ಹ್ಯಾಪಿ ನ್ಯೂ ಇಯರ್' ಕನ್ನಡ ಸಿನೆಮಾ ಇದರ ಮೊದಲ ಫಲಾನುಭವಿಯಾಗಲಿದೆ. 
ಇದರ ಬಗ್ಗೆ ಪ್ರತಿಕ್ರಿಯಿಸುವ ನಿರ್ದೇಶಕ ಪನ್ನಗ ಭರಣ "ಯಾರ ಜೀವನದಲ್ಲಾದರೂ ಏನಾದರೂ ಹೊಸತು ಘಟಿಸಿದರೆ, ಅದು ಅವರಿಗೆ ಹೊಸ ವರ್ಷದ ಆರಂಭ. ಈ ಸಿನೆಮಾ ಕನ್ನಡ ಪ್ರೇಕ್ಷಕರಿಗೆ ಹೊಸ ವರ್ಷ, ಏಕೆಂದರೆ ಇದೆ ಸಮಯದಲ್ಲಿ ಟಿಕೆಟ್ ಗರಿಷ್ಟ ಮಿತಿ ೨೦೦ರೂ ಜಾರಿಯಾಗಿದೆ" ಎನ್ನುತ್ತಾರೆ ಸಂತಸಗೊಂಡಿರುವ ನಿರ್ದೇಶಕ. 
ಪನ್ನಗ ಅವರ ಈ ಚೊಚ್ಚಲ ನಿರ್ದೇಶನದ ಚಿತ್ರ ತುಸು ವಿಳಂಬವಾಗಿತ್ತು. ನ್ಯೂಯಾರ್ಕ್ ಫಿಲಂ ಅಕಾಡೆಮಿಯಲ್ಲಿ ಎಂಟು ವರ್ಷ ಅಧ್ಯಯನ ಮಾಡಿದ ನಂತರ ಈ ಸಿನೆಮಾ ನಿರ್ದೇಶನಕ್ಕೆ ಇಳಿದಿದ್ದರು. ಇಷ್ಟು ಕಾದಿದ್ದು ಸಾರ್ಥಕ ಎನ್ನುವ ಅವರು "ಈ ವಿಳಂಬ ನನಗೆ ಸಮಾಧಾನದ ಪಾಠ ಹೇಳಿದೆ. ನಿರ್ದೇಶಕನಿಗೆ ಶ್ರಮ ಮತ್ತು ಸಮಾಧಾನ ಅತಿ ಮುಖ್ಯ ಎಂದು ಇದು ತಿಳಿಸಿಕೊಟ್ಟಿದೆ. ನನ್ನ ವೃತ್ತಿ ಜೀವನವನ್ನು ಇನ್ನಷ್ಟು ಮುಂಚೆಯೇ ಪ್ರಾರಂಭಿಸಿದ್ದರೆ ನನಗೆ ಸುಲಭವಾಗುತ್ತಿತ್ತೇನೋ. ಆಗ ಒಳ್ಳೆಯ ಸಿನೆಮಾ ಸಿಗುವುದಕ್ಕೆ ನಾನು ಕಷ್ಟ ಪಡಬೇಕಿರಲಿಲ್ಲ. ಎಲ್ಲವು ಪಾಠ ಕಲಿಸಿದೆ" ಎನ್ನುತ್ತಾರೆ ಪನ್ನಗ. 
ರಾಷ್ಟ್ರ ಪ್ರಶಸ್ತಿ ವಿಜೇತ ತಂದೆ ನಾಗಾಭರಣ ಅವರಿಂದ ಸಾಕಷ್ಟು ಕಲಿತಿರುವುದಾಗಿಯೂ ತಿಳಿಸುವ ಪನ್ನಗ, ವರ್ಷಗಳು ಕಳೆದಂತೆ ನನ್ನ ಐಡಿಯಾಗಳು ಬದಲಾಗಿವೆ ಎಂದು ಕೂಡ ತಿಳಿಸುತ್ತಾರೆ. 
"ನಾನು ಕೊನೆಯ ಬಾರಿಗೆ ನನ್ನ ತಂದೆಯವರ ಅಲ್ಲಮ ಸಿನೆಮಾದಲ್ಲಿ ಕೆಲಸ ಮಾಡಿದ್ದು, ಬಹಳಷ್ಟು ಕಲಿಸಿತು. ರಾಷ್ಟ್ರ-ರಾಜ್ಯ ಪ್ರಶಸ್ತಿ ವಿಜೇತ ತಂತ್ರಜ್ಞರ ಜೊತೆಗೆ ಕೆಲಸ ಮಾಡಿದ್ದು ಸಾಕಷ್ಟು ಅನುಭವ ನೀಡಿತು. ಈ ಅನುಭವ ನನ್ನ ಚೊಚ್ಚಲ ನಿರ್ದೇಶನದ 'ಹ್ಯಾಪಿ ನ್ಯೂ ಇಯರ್'ಗೆ ಸಹಕರಿಸಿತು" ಎನ್ನುತ್ತಾರೆ ನಿರ್ದೇಶಕ. 
ನ್ಯೂಯಾರ್ಕ್ ಫಿಲಂ ಅಕಾಡೆಮಿಯಲ್ಲಿ ಕಲಿತಿದ್ದು ನಿಮಗೆ ಸಹಕರಿಸಿತೇ ಎಂಬ ಪ್ರಶ್ನೆಗೆ "ಖಂಡಿತ.. ಚಿತ್ರೀಕರಣ ಸೃಜನಶೀಲ ಕಲೆ ಮತ್ತು ಅದು ಪ್ರತಿ ವ್ಯಕ್ತಿಗೂ ವಿಭಿನ್ನ. ಆದರೆ ಚಿತ್ರೀಕರಣದ ಮುಂಚಿನ ಯೋಜನೆಗಳು, ಚಿತ್ರೀಕರಣ ನಂತರದ ಕೆಲಸಗಳು ಇವೆಲ್ಲವನ್ನೂ ಪರಿಣಾಮಕಾರಿಯಾಗಿ ಮಾಡುವುದಕ್ಕೆ ಮತ್ತು ಹಣ ಉಳಿಸುವುದಕ್ಕೆ ನ್ಯೂಯಾರ್ಕ್ ಫಿಲಂ ಅಕಾಡೆಮಿ ಪಾಠ ಸಹಾಯ ಮಾಡಿದೆ. ನಾನು ೫೦ ದಿನದ ಚಿತ್ರೀಕರಣ ಯೋಜಿಸಿಕೊಂಡಿದ್ದರೂ, ೪೬ ದಿನಗಳಲ್ಲಿ ಸಂಪೂರ್ಣಗೊಳಿಸಿದೆ" ಎನ್ನುತ್ತಾರೆ ಪನ್ನಗ. 
SCROLL FOR NEXT